ಚಾಮರಾಜನಗರ: ನಿಜಶರಣ ಅಂಬಿಗರ ಚೌಡಯ್ಯ 12ನೇ ಶತಮಾನದ ಪ್ರಮುಖ ವಚನಕಾರರು. ಅಂದಿನ ಕಾಲದ ಶೋಷಣೆ ವಿರುದ್ಧ ತಮ್ಮದೇ ಆದ ವಚನಗಳಿಂದ ಎಚ್ಚರಿಸಿದರು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಜನತೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಶ್ರಮ ಜೀವಿಗಳಾಗಿರುವ ಸಮುದಾಯ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ವಿಶೇಷ ಗಮನಹರಿಸಿ ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ಅಂಬಿಗರ ಚೌಡಯ್ಯ ಬಸವಣ್ಣನವರ ಕಾಯಕ ತತ್ವದಲ್ಲಿ ಅಪಾರ ನಂಬಿಕೆ ಉಳ್ಳವರಾಗಿದ್ದರು. ಅಂಬಿಗರ ಚೌಡಯ್ಯ ತಮ್ಮ ಹೆಸರಿನಲ್ಲೇ ವಚನಾಂಕಿತವನ್ನು ಬಳಸಿ ರಚಿಸಿರುವ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕ ಪ್ರಜ್ಞೆ ಹೊಂದಿದ್ದರು ಎಂದರು.
ಮುಖಂಡ ಗು. ಪುರುಷೋತ್ತಮ್ ಮಾತನಾಡಿ, ಅಂಬಿಗರ ಚೌಡಯ್ಯ ಸಮಾಜದ ಡಂಬಾಚಾರಗಳನ್ನು ನಿರ್ಭೀತಿಯಿಂದ ಕಟುವಾಗಿ ಟೀಕಿಸಿದರು. ಅವರ ವಚನಗಳಲ್ಲಿ ವೈಚಾರಿಕತೆಯನ್ನು ನಿರೂಪಿಸಿದ್ದಾರೆ. ತಾರತಮ್ಯ ನೀತಿಯನ್ನು ವಿರೋಧಿಸಿದ್ದಾರೆ. ಇತರ ವಚನಕಾರರಿಗಿಂತ ಭಿನ್ನರಾಗಿದ್ದ ಅಂಬಿಗರ ಚೌಡಯ್ಯ ಅವರು ನುಡಿದಂತೆ ನಡೆದವರು ಎಂದರು. ಸಂಘಟನೆಗಳ ಮುಖಂಡ ಪ್ರಕಾಶ್ ಇತರರು ಕಾರ್ಯಕ್ರಮದಲ್ಲಿ ಇದ್ದರು.