

ಚಾಮರಾಜನಗರ: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಹೊರಗುತ್ತಿಗೆ ನೌಕರಿ ಕೊಡುತ್ತಿರುವುದು ತಾತ್ಕಾಲಿಕ ಪರಿಹಾರವಾಗಿದ್ದರೂ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ಶೀಘ್ರದಲ್ಲೇ ಈಡೇರಿಸಬೇಕಿದೆ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಆಕ್ಸಿಜನ್ ಸಂತ್ರಸ್ತ ಕುಟುಂಬಗಳೊಂದಿಗೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗದ ಭರವಸೆ ಸಿಕ್ಕಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆಯಲ್ಲಿ ಮತದಾರರಿಗೆ ನೀಡಿದ್ದ 5 ಗ್ಯಾರಂಟಿಗಳು ಈಗ ಅನುಷ್ಠಾನಗೊಂಡಿವೆ. ಇವುಗಳ ಮಧ್ಯೆ ಆಕ್ಸಿಜನ್ ಸಂತ್ರಸ್ತರಿಗೆ ನೀಡಿದ್ದ ಸರ್ಕಾರಿ ಉದ್ಯೋಗದ ಭರವಸೆ ಇನ್ನೂ ಈಡೇರಿಲ್ಲ.
ಕಾಂಗ್ರೆಸ್ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕೆಂದು ಸಂತ್ರಸ್ತರ ಕುಟುಂಬಸ್ಥರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಗಣರಾಜ್ಯೋತ್ಸವದಂದು ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸಂತ್ರಸ್ತರಿಗೆ ೆ.1ರಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗುವುದು, ಮುಂದಿನ ದಿನಗಳಲ್ಲಿ ಇವರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಕ್ರಮವಹಿಸುವರು ಎಂದು ಹೇಳಿದರು.
ಈ ಹೇಳಿಕೆ ಸಂತ್ರಸ್ತರಿಗೆ ತಾತ್ಕಾಲಿಕ ಸಮಾಧಾನವನ್ನು ಮಾತ್ರ ತಂದುಕೊಟ್ಟಿದೆ. ಕುಟುಂಬ ನಿರ್ವಹಣೆಯ ಅನಿವಾರ್ಯತೆ ಇರುವವರು ಕೆಲಸಕ್ಕೆ ಹೋಗಲು ನಿರ್ಧರಿಸಿದ್ದಾರೆ. ಇನ್ನು ಕೆಲವರು ನೇರವಾಗಿ ಸರ್ಕಾರಿ ಉದ್ಯೋಗವನ್ನೇ ನೀಡಬೇಕೆಂದು ಹೇಳುತ್ತಿದ್ದಾರೆ. ಇದಕ್ಕಾಗಿ ಸಂತ್ರಸ್ತರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಇಷ್ಟು ತಿಂಗಳ ಕಾಲಾವಕಾಶದಲ್ಲಿ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗವನ್ನೇ ಕೊಡಬಹುದಿತ್ತು. ಸಂತ್ರಸ್ತರ ವಿದ್ಯಾರ್ಹತೆ ಆಧಾರದ ಮೇಲೆ ಕೆಲಸ ನೀಡಬೇಕು. ಹೊರಗುತ್ತಿಗೆ ಆಧಾರದಲ್ಲಿ ಎಲ್ಲರಿಗೂ ಡಿ ಗ್ರೂಪ್ ನೌಕರಿ ನೀಡಬಾರದು. ಮುಖ್ಯವಾಗಿ ಸರ್ಕಾರಿ ನೌಕರಿಯನ್ನು ಕೊಡುವ ಪ್ರಕ್ರಿಯೆಯನ್ನು ಬೇಗ ಮುಗಿಸಬೇಕಿದೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಗುತ್ತಿಗೆ ಉದ್ಯೋಗ ಅಭದ್ರತೆ
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ ನನ್ನ ಪತಿ ಕುಮಾರ್ ಸತ್ತು ಹೋದರು. ಅವರನ್ನು ಕಳೆದುಕೊಂಡ ಬಳಿಕ ಕುಟುಂಬ ನಿರ್ವಹಣೆಗೆ ತುಂಬಾ ತೊಂದರೆಯಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವುದರಿಂದ ಉದ್ಯೋಗ ಭದ್ರತೆ ಇರುವುದಿಲ್ಲ. ಹಾಗಾಗಿ ಸರ್ಕಾರಿ ನೌಕರಿಯನ್ನೇ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತೃತ್ವದಲ್ಲಿ ಸಭೆ ಕರೆದಿದ್ದಾಗಲೂ ನಾವು ಕಾಯಂ ಉದ್ಯೋಗ ನೀಡುವಂತೆ ಕೇಳಿಕೊಂಡಿದ್ದೆವು. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ನಮ್ಮ ಪರಿಸ್ಥಿತಿ ಹೇಳಿಕೊಳ್ಳಬೇಕು ಎಂದು ಕೊಂಡರೆ ಅವಕಾಶವೇ ಸಿಗುತ್ತಿಲ್ಲ.
ಆಶಾ ಚಾಮರಾಜನಗರ
ಸರ್ಕಾರಿ ಕೆಲಸದ ಭರವಸೆ ಈಡೇರಿಸಿ
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕೆಲವರ ಕುಟುಂಬಗಳು ತೀರಾ ಸಂಕಷ್ಟದಲ್ಲಿವೆ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ಮಹಿಳೆಯರು ಮನೆ ಕೆಲಸ ಮಾಡಿಕೊಂಡು ಬದುಕು ನಡೆಸುವಂತಹ ದುಸ್ಥಿತಿಗೆ ತಲುಪಿದ್ದಾರೆ. ಈ ನಿಟ್ಟಿನಲ್ಲಿ ತಕ್ಷಣಕ್ಕೆ ಹೊರಗುತ್ತಿಗೆ ಆಧಾರದಲ್ಲಿ ನೌಕರಿ ನೀಡಿರುವುದರಿಂದ ಈ ಕುಟುಂಬಗಳಿಗೆ ತಕ್ಕಮಟ್ಟಿಗೆ ನೆರವು ನೀಡಿದಂತಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆಯಂತೆ ಮೃತರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಕೋವಿಡ್‌ನಲ್ಲಿ ಆಮ್ಲಜನಕ ಸಿಗದೆ ನನ್ನ ತಾಯಿ ಗೀತಾಲಕ್ಷ್ಮೀ ತೀರಿಕೊಂಡರು.
ರಮೇಶ್ ಬಾಬು ಚಾಮರಾಜನಗರ
ಡಿಸಿಎಂ ಡಿಕೆಶಿ ಭೇಟಿಗೆ ಅವಕಾಶ ನೀಡಿ
ಆಕ್ಸಿಜನ್ ದುರಂತದಲ್ಲಿ ನನ್ನ ತಂದೆ ಮಾಳಿಗಯ್ಯ ಮೃತಪಟ್ಟರು. ಜೋಡೋ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಸ್ಪಷ್ಟವಾಗಿ ಹೇಳಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಫೆ.1ರಿಂದ ಹೊರಗುತ್ತಿಗೆ ಆಧಾರದಲ್ಲಿ ನೌಕರಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ನಮಗೆ ಕಾಯಂ ಉದ್ಯೋಗ ನೀಡಿದರೆ ಒಂದು ಭದ್ರತೆ ಇರುತ್ತದೆ. ಹೊರಗುತ್ತಿಗೆ ಆಧಾರದ ನೌಕರಿಯಲ್ಲಿ ಭದ್ರತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಈಗಲೂ ಭರವಸೆ ಇದ್ದು, ಕಾಯಂ ಉದ್ಯೋಗ ನೀಡಬೇಕೆಂದು ಒತ್ತಾಯಿಸುತ್ತೇವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುತ್ತೇವೆ.
ಎಂ.ನಾಗರತ್ನಮ್ಮ ಯರಗಂಬಳ್ಳಿ, ಯಳಂದೂರು
ನುಡಿದಂತೆ ನಡೆಯಲು ಮನವಿ
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸದ್ಯಕ್ಕೆ ಹೊರಗುತ್ತಿಗೆ ಆಧಾರದಲ್ಲಿ ನೌಕರಿ ನೀಡುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕಾಯಂ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ನನ್ನ ತಂದೆ ಪುಟ್ಟಮಾದನಾಯಕ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟರು. ನುಡಿದಂತೆ ನಡೆಯುತ್ತೇವೆ ಎಂಬ ಆಶಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನಮಗೆ ಉದ್ಯೋಗದ ಭರವಸೆ ನೀಡಿತ್ತು. ಅಂತೆಯೇ ನಡೆದುಕೊಳ್ಳಬೇಕು.
ನಂಜುಂಡಸ್ವಾಮಿ ಜ್ಯೋತಿಗೌಡನಪುರ, ಚಾಮರಾಜನಗರ
ವಿದ್ಯಾರ್ಹತೆಗೆ ತಕ್ಕ ನೌಕರಿ ಕೊಡಿ
ಆಮ್ಲಜನಕ ದುರಂತದಲ್ಲಿ ನನ್ನ ತಂದೆ ಸಿದ್ದರಾಜು ಮೃತಪಟ್ಟರು. ನಮ್ಮಂತ ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಲಾಗುತ್ತಿದೆ. ಆದರೆ ವಿದ್ಯಾರ್ಹತೆಗೆ ತಕ್ಕಂತೆ ನೌಕರಿ ನೀಡುತ್ತಿಲ್ಲ. ಎಲ್ಲರಿಗೂ ಡಿ ಗ್ರೂಪ್ ನೌಕರಿ ಎಂದು ಹೇಳಿದ್ದಾರೆ. ಸುಮಾರು 12 ಜನರನ್ನು ಹೊರತುಪಡಿಸಿ ಉಳಿದವರು ಒಪ್ಪಿಕೊಂಡಿದ್ದಾರೆ. ನಮ್ಮನ್ನು ಸಮಾಧಾನಪಡಿಸಲು ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಗರಕ್ಕೆ ಭೇಟಿ ನೀಡಿದ್ದಾಗ ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲ ಎನಿಸುತ್ತದೆ.
ಮಂಜುನಾಥ್ ನಲ್ಲೂರು, ಚಾಮರಾಜನಗರ
ಅನಿವಾರ್ಯತೆಯಿಂದ ಒಪ್ಪಿಗೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಮತ್ತು ಅಧಿಕಾರಕ್ಕೆ ಬಂದ ನಂತರವೂ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ನನ್ನ ಪತಿ ಗುರುಪ್ರಸಾದ್ ಮೃತಪಟ್ಟಿದ್ದಾರೆ. ಜಿಲ್ಲಾಡಳಿತ ಈಗ ಹೊರಗುತ್ತಿಗೆ ನೌಕರಿ ನೀಡುತ್ತಿದೆ. ಇದು ನಮಗೆ ಒಪ್ಪಿಗೆಯಾಗಿಲ್ಲ. ಆದರೆ ಕುಟುಂಬದ ನಿರ್ವಹಣೆ ಕಷ್ಟವಾಗಿದ್ದು, ಗುತ್ತಿಗೆ ಆಧಾರದ ಕೆಲಸಕ್ಕೆ ಹೋಗುತ್ತೇವೆ. ಮುಂದಿನ ದಿನಗಳಲ್ಲಿ ನಮಗೆ ಕಾಯಂ ಉದ್ಯೋಗ ನೀಡಬೇಕು ಎಂದು ಒತ್ತಾಯಿಸುತ್ತೇವೆ.
ಸವಿತಾ ಲಕ್ಕೂರು, ಚಾಮರಾಜನಗರ
ಸರ್ಕಾರಿ ಉದ್ಯೋಗ, ಪರಿಹಾರ ಕೊಡಲೇಬೇಕು
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ಕೊಡಬೇಕು. ಈ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ದುರಂತ ನಡೆದಾಗಿನಿಂದ ಇಲ್ಲಿಯವರೆಗೆ ಸಂತ್ರಸ್ತರ ಪರವಾಗಿ ಎಸ್‌ಡಿಪಿಐ ವತಿಯಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ 10-15 ಕುಟುಂಬಗಳ ಸಂಕಷ್ಟವನ್ನು ನೋಡಿದರೆ ಹೊರಗುತ್ತಿಗೆ ನೌಕರಿ ನೀಡಿರುವುದನ್ನು ಸ್ವಾಗತಿಸುತ್ತೇವೆ. ಅದಾಗ್ಯೂ ದುರಂತದಲ್ಲಿ ಮೃತಪಟ್ಟ ಸುಮಾರು 36 ಕುಟುಂಬದಲ್ಲಿ ತಲಾ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ 50 ಲಕ್ಷ ರೂ. ಪರಿಹಾರವನ್ನು ನೀಡಬೇಕು. ಸಂತ್ರಸ್ತರ ಪಟ್ಟಿಯಲ್ಲಿ ಕೆಲವರ ಹೆಸರು ಕೈಬಿಟ್ಟು ಹೋಗಿದ್ದು, ಅಂತಹವರನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸುತ್ತೇನೆ.
ಎಂ.ಮಹೇಶ್ ಗಾಳೀಪುರ ನಗರಸಭೆ ಸದಸ್ಯ, ಚಾಮರಾಜನಗರ
ಜರೂರು ಉದ್ಯೋಗ ಕೊಡಿಸಲು ಕ್ರಮ
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ಕೊಡಿಸುವ ಭರವಸೆ ಹಿನ್ನೆಲೆಯಲ್ಲಿ ಕೆಲವು ಸಂತ್ರಸ್ತರನ್ನು ಆಯ್ಕೆ ಮಾಡಲಾಗಿದೆ. ಜರೂರಾಗಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೇವೆ.
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ