

ಚಾಮರಾಜನಗರ: ರಾಜ್ಯ ಸರ್ಕಾರ ಅಂತೂ, ಇಂತೂ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ್ದು, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಕೈಗೆ ಎಂಎಸ್‌ಐಎಲ್ ಕೀ ಕೊಟ್ಟಿದೆ!
ಶುಕ್ರವಾರ ಅಧಿಕೃತವಾಗಿ ಬಿಡುಗಡೆಯಾದ ಪಟ್ಟಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಶಾಸಕರಿಗೆ ನಿಗಮಗಳಲ್ಲಿ ಅವಕಾಶ ಸಿಕ್ಕಿದೆ. ಅಂತೆಯೇ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದೆ. ಈ ತಕ್ಷಣಕ್ಕೆ ಜಾರಿಗೆ ಬರುವಂತೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ(ಸಚಿವ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲ ಸೌಲಭ್ಯಗಳೊಂದಿಗೆ) ಮುಂದಿನ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ.
ಜಿಲ್ಲೆಗೆ ಒಲಿದ ನಿಗಮ, ಮಂಡಳಿ:
ಸೋಲರಿಯದ ನಾಯಕ ಎಂದೇ ಕರೆಯಲ್ಪಡುವ, ನಾಲ್ಕು ಬಾರಿ ಗೆದ್ದಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಮೂಲಕ ಜಿಲ್ಲೆಗೆ ನಿಗಮ, ಮಂಡಳಿ ಒಲಿದು ಬಂದಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗುಂಡ್ಲುಪೇಟೆ ಶಾಸಕರಾಗಿದ್ದ ಸಿ.ಎಸ್.ನಿರಂಜನ್‌ಕುಮಾರ್ ಅವರನ್ನು ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಅವಕಾಶ ಸಿಕ್ಕಿದೆ. ಈ ಮೂಲಕ ಉಳಿದ ಆಕಾಂಕ್ಷಿಗಳು ಎರಡನೇ ಪಟ್ಟಿಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಇನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ರಾಜಕೀಯ ಹಾದಿಯಲ್ಲಿ ನಿಗಮ ಮಂಡಳಿ ಅವಕಾಶ ಎರಡನೇ ಬಾರಿಗೆ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕ ರಾಜ್ಯ ರಸ್ತೆ ನಿಗಮದ ಅಧ್ಯಕ್ಷರಾಗಿದ್ದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯಾದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇದೀಗ ಎಂಎಸ್‌ಐಎಲ್‌ನ ಅಧ್ಯಕ್ಷರಾಗಿದ್ದಾರೆ.
ಶೆಟ್ಟರ ರಾಜಕೀಯ ಹಾದಿ
ಶಾಸಕ ಸಿ.ಪುಟ್ಟರಂಗಶೆಟ್ಟಿ ಪಂಚಾಯಿತಿಯಲ್ಲಿ ಉಪ ಪ್ರಧಾನರಾಗಿ ರಾಜಕೀಯ ಆರಂಭಿಸಿ ವಿಧಾನಸೌಧ ತಲುಪಿದವರು. ಮೊದಲ ಬಾರಿಗೆ ಗೌಡಹಳ್ಳಿ ಪಂಚಾಯಿತಿ ಉಪ ಪ್ರಧಾನರಾಗಿ ಸೇವೆ ಆರಂಭಿಸಿದರು. ತದನಂತರ 1975ರಲ್ಲಿ ಅಗರ ಮಂಡಲ ಪಂಚಾಯಿತಿಯಿಂದ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಸೋಲು ಅನುಭವಿಸುತ್ತಾರೆ. ಒಂದು ಸೋಲಿಗೆ ಎದೆಗುಂದದ ಪುಟ್ಟರಂಗಶೆಟ್ಟಿ ಯಳಂದೂರು ಕಸಬಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದರು. 5 ತಿಂಗಳ ಕಾಲ ಜಿಪಂ ಉಪಾಧ್ಯಕ್ಷರೂ ಆಗಿದ್ದರು. 2008ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇದಾದ ಬಳಿಕ ಸತತ ನಾಲ್ಕು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.
ಜನಸೇವೆಯ ತುಡಿತ
ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ 1954ರ ನ.30ರಲ್ಲಿ ಜನಿಸಿದ ಸಿ.ಪುಟ್ಟರಂಗಶೆಟ್ಟಿ ಜನಸೇವೆಯ ತುಡಿತದಿಂದ ರಾಜಕೀಯ ಪ್ರವೇಶ ಮಾಡಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮುಗಿಸಿದರು. ನಂತರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣಕ್ಕಾಗಿ ಯಳಂದೂರು ಪಟ್ಟಣವನ್ನು ಆಶ್ರಯಿಸಿದರು. ಕೊಳ್ಳೇಗಾಲದ ಶ್ರೀ ಮಹದೇಶ್ವರ ಕಾಲೇಜಿನಲ್ಲಿ ಪದವಿ ಪೂರೈಸಿ, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಶಿಕ್ಷಣ ಸಾಕು ಎನಿಸುವಾಗಲೇ ದಾವಣಗೆರೆ ಜಿಲ್ಲಾ ಎಪಿಎಂಸಿಯಲ್ಲಿ ಗುಮಾಸ್ತನಾಗಿ ಸರ್ಕಾರಿ ಉದ್ಯೋಗಕ್ಕೆ ಸೇರಿದ ಪುಟ್ಟರಂಗಶೆಟ್ಟಿ ಅವರಿಗೆ ಯಾಕೋ ಈ ವೃತ್ತಿ ಅಷ್ಟೊಂದು ತೃಪ್ತಿ ತರಲಿಲ್ಲ ಅನಿಸುತ್ತದೆ. ಈ ವೃತ್ತಿಯನ್ನು ತೊರೆದು ವ್ಯವಸಾಯ, ಕೃಷಿ ಮಾಡುವುದರ ಜತೆಗೆ ನ್ಯಾಯ ಬೆಲೆ ಅಂಗಡಿಯನ್ನು ಪ್ರಾರಂಭಿಸಿದರು. ಅಂದಿನ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಂ.ಸಿದ್ದಮಾದಯ್ಯ ಒಡನಾಟದಿಂದ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡರು.
ವೈರಲ್ ಆಗಿತ್ತು ಮತ್ತೊಂದು ಪಟ್ಟಿ
ನಿಗಮ, ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆಗೂ ಮುನ್ನ ಮತ್ತೊಂದು ಪಟ್ಟಿ ವೈರಲ್ ಆಗಿತ್ತು. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಪಟ್ಟಿಯಲ್ಲಿ ಕೊಳ್ಳೇಗಾಲ ಮಾಜಿ ಶಾಸಕ ಜಯಣ್ಣ ಅವರ ಹೆಸರು ಇತ್ತು. ಇದರೊಂದಿಗೆ ಚಾಮರಾಜನಗರ ಲೋಕಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪುಷ್ಪಾ ಅಮರ್‌ನಾಥ್ ಅವರ ಹೆಸರೂ ಇತ್ತು. ಆದರೆ ಇದು ಪಕ್ಷ ಅಧಿಕೃತವಾಗಿ ಹೊರಡಿಸಿರುವ ಪಟ್ಟಿಯಲ್ಲ ಎಂದು ತಿಳಿದುಬಂತು. ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಜಯಣ್ಣ, ಜಿಲ್ಲಾಧ್ಯಕ್ಷ ಮರಿಸ್ವಾಮಿ ಆಕಾಂಕ್ಷಿಯಾಗಿದ್ದರು.
ಬೆಂಬಲಿಗರಲ್ಲಿ ಸಂತಸ:
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿರುವುದಕ್ಕೆ ಬೆಂಬಲಿಗರಲ್ಲಿ ಸಂತಸ ಮೂಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಸಚಿವರಾಗುತ್ತಾರೆಂಬ ವಿಶ್ವಾಸ ಕೊನೆಯ ಹಂತದವರೆಗೂ ಇತ್ತು. ಈ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲು ಹೋಗಿದ್ದವರು ಅಂತಿಮವಾಗಿ ಸಚಿವ ಸ್ಥಾನ ಸಿಗದೆ ಕ್ಷೇತ್ರಕ್ಕೆ ಮರಳಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಬೆಂಬಲಿಗರು ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಸಚಿವಗಿರಿ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ರಾಜ್ಯದಲ್ಲಿ ಉಪ್ಪಾರ ಸಮಾಜದಲ್ಲಿ ಇರುವ ಏಕೈಕ ಶಾಸಕನಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದರು.
ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಾನಪಡಿಸಿ ಸಿ.ಪುಟ್ಟರಂಗಶೆಟ್ಟಿಗೆ ಡೆಪ್ಯುಟಿ ಸ್ಪೀಕರ್ ಹುದ್ದೆ ನೀಡಲು ಮುಂದಾದರು. ಈ ಜವಾಬ್ದಾರಿಯನ್ನು ತಿರಸ್ಕರಿಸಿದ ಸಿ.ಪುಟ್ಟರಂಗಶೆಟ್ಟಿ ಶಾಸಕರಾಗಿಯೇ ಇರುವುದಾಗಿ ತಿಳಿಸಿದ್ದರು. ಇದೀಗ ನಿಗಮ, ಮಂಡಳಿಯಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಸ್ಥಾನ ಸಿಕ್ಕಿದ್ದು, ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿರುವುದಕ್ಕೆ ಬೆಂಬಲಿಗರು ಸಮಾಧಾನಗೊಂಡಿದ್ದಾರೆ.
ರಾಜ್ಯ ಸರ್ಕಾರ ನಿಗಮ, ಮಂಡಳಿಯಲ್ಲಿ ಅವಕಾಶ ನೀಡಿದೆ. ಇದನ್ನು ಒಳ್ಳೆಯ ರೀತಿಯಲ್ಲಿ ನಿಭಾಯಿಸಬೇಕು.ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ, ಎಂಎಸ್‌ಐಎಲ್ ನೂತನ ಅಧ್ಯಕ್ಷ