ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

26chn8
Published on

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಟ್ಯಾಕ್ಟರ್ ರ‌್ಯಾಲಿ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ ರೈತ ನಾಯಕರು, ಇಲ್ಲಿಂದ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಟ್ರ್ಯಾಕ್ಟರ್ ರ‌್ಯಾಲಿ ನಡೆಸಿದರು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಐತಿಹಾಸಿಕ ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳ ಈಡೇರಿಕೆಗೆ ಆಗ್ರಹಿಸಿದರು.

ರಾಜ್ಯ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ೋಷಿಸಿ ಸಾಲ ಮನ್ನಾ, ವೈಜ್ಞಾನಿಕ ಬೆಳೆ, ನಷ್ಟ ಪರಿಹಾರ, ಆಹಾರ, ಉದ್ಯೋಗ, ಭೂಮಿಗಾಗಿ ಒತ್ತಾಯಿಸಿದರು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಆಕ್ರಮಣ ವಿರೋಧಿದರು. ಧರ್ಮ ನಿರಪೇಕ್ಷಿತ, ಪ್ರಜಾಪ್ರಭುತ್ವ ಗಣತಂತ್ರ ಸಂವಿಧಾನ ರಕ್ಷಣೆಯಾಗಬೇಕೆಂದರು.

ಕಾರ್ಪೋರೇಟ್ ಪರವಾದ ನೀತಿಗಳನ್ನು ಮರೆಮಾಚಲು ಬಿಜೆಪಿ ರಾಮಮಂದಿರವನ್ನು ರಾಜಕೀಯ ಸಾಧನವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ನಮ್ಮ ಸಮಾಜದ ಶಾಂತಿ, ಸೌಹಾರ್ದತೆ, ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ವಿಭಜನಕಾರಿ ಕೋಮುವಾದವನ್ನು ಹರಡುತ್ತಿದೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರನ್ನು ದಾಳಿ, ದಬ್ಬಾಳಿಕೆಗಳಿಗೆ ಗುರಿ ಪಡಿಸಲಾಗುತ್ತಿದೆ ಎಂದರು.

ಬರಹಗಾರರು, ಬುದ್ಧಿಜೀವಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳ ಕಾರ್ಯಕರ್ತರನ್ನು, ಸರ್ಕಾರವನ್ನು ಟೀಕಿಸಿದ ಕಾರಣಕ್ಕಾಗಿ ಇಡಿ, ಸಿಬಿಐ, ಎನ್‌ಐಎನಂತಹ ವಿವಿಧ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಯುಎಪಿಎ ದೇಶ ದ್ರೋಹ ಮುಂತಾದ ಕರಾಳ ಕಾಯ್ದೆಗಳ ಮೂಲಕ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿದರು. ಸಂಘದ ಉಪಾಧ್ಯಕ್ಷ ಮಹೇಶ್ ಪ್ರಭು, ಶಾಂತಮಲ್ಲಪ್ಪ, ಮಹೇಶ್‌ಕುಮಾರ್, ಮಹೇಶ್ ಮರಿಯಾಲ, ಮಹದೇವಪ್ಪ ಶಿವಪುರ, ಶೈಲೇಂದ್ರ, ಮಾದಮ್ಮ, ಗೌಡೇಗೌಡ, ದೇಮಹಳ್ಳಿ ಪ್ರಸಾದ್, ಸಂತೋಷ್, ದಿಲೀಪ್, ಶಿವರಾಮು, ಬಸವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net