ಡಾ.ಅಂಬೇಡ್ಕರ್ ಕೊಡುಗೆ ಸ್ಮರಣೀಯ

26chn9
Published on

ಚಾಮರಾಜನಗರ: ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವನ್ನು ಕಲ್ಪಿಸಿಕೊಟ್ಟ ಪರಿಪೂರ್ಣ ಸಂವಿಧಾನ ರಚನೆಗೆ ಡಾ.ಅಂಬೇಡ್ಕರ್ ಕೊಡುಗೆ ಸ್ಮರಣೀಯ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವವಂದನೆ ಸ್ವೀಕರಿಸಿ ಜಿಲ್ಲೆಯ ಜನತೆಗೆ ಶುಭ ಸಂದೇಶ ನೀಡಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶ್ರದ್ಧೆ, ಉತ್ಸುಕತೆ ಹಾಗೂ ಅವಿರತ ಶ್ರಮದಿಂದಾಗಿ ಇಂದು ಜಗತ್ತಿನ ಬಹುದೊಡ್ಡ ಲಿಖಿತ ಸಂವಿಧಾನವು ನಮ್ಮದಾಗಿದೆ. 75ನೇ ವರ್ಷದ ಸುಸಂದರ್ಭದಲ್ಲಿ ಸಂವಿಧಾನ ಆಶಯಗಳನ್ನು ಮತ್ತು ಧ್ಯೇಯೋದ್ದೇಶಗಳನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಕಟಿಬದ್ಧರಾಗಿ ಎಲ್ಲರೂ ಕಾರ್ಯನಿರ್ವಹಿಸೋಣ ಎಂದು ಹೇಳಿದರು.

ಭಾರತವು ಗಣತಂತ್ರ ದೇಶ ಎಂದು ೋಷಿಸಿಕೊಂಡು ಇಂದಿಗೆ 74 ವರ್ಷಗಳು ಕಳೆದಿದೆ. ಗಣತಂತ್ರ ವ್ಯವಸ್ಥೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವು ಜನರ ಸಕ್ರಿಯ ಸಹಭಾಗಿತ್ವ ಮತ್ತು ಸಹಕಾರ ಇಲ್ಲದೇ ಅರ್ಥಪೂರ್ಣವಾಗಲಾರದು. ಸಂಕುಚಿತ ಭಾವನೆ, ಪ್ರಾದೇಶಿಕ ಅಸಮಾನತೆ ಇತ್ಯಾದಿ ವಿಷಯಗಳನ್ನು ಬದಿಗೊತ್ತಿ ಅನಕ್ಷರತೆ, ಬಡತನ, ನಿರುದ್ಯೋಗ ನಿರ್ಮೂಲನೆ ಮಾಡಲು ನಾವೆಲ್ಲರೂ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಈ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್‌ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮೀ ಇತರರಿದ್ದರು.

ಗಮನ ಸೆಳೆದ ಪಥಸಂಚಲನ:
75ನೇ ಗಣರಾಜ್ಯೋತ್ಸವ ಅಂಗವಾಗಿ ಸುಮಾರು 18 ತುಕಡಿಗಳಿಂದ ನಡೆದ ಪಥಸಂಚಲನ ಆಕರ್ಷಕವಾಗಿತ್ತು. ಜಿಲ್ಲಾ ಸಶಸ ಮೀಸಲು ಕೇಂದ್ರ ತುಕಡಿ, ಸಿವಿಲ್ ಪೊಲೀಸ್ ತುಕಡಿ, ಅರಣ್ಯ ರಕ್ಷಕದಳ, ಅಬಕಾರಿ ದಳ, ಗೃಹರಕ್ಷಕ ದಳ ಮತ್ತು ಇದೇ ಮೊದಲ ಬಾರಿಗೆ ಚಾಮರಾಜನಗರ ವೈದ್ಯಕೀಯ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ನಡೆಸಿದ ಪಥಸಂಚಲನ ಗಮನ ಸೆಳೆಯಿತು. ಸಂತ ಜೋಸ್ೆ ಪ್ರೌಢಶಾಲೆ, ಬಂಜಾರ ಇಂಡಿಯನ್ ಶಾಲೆ ಸೇವಾದಳ, ಎಂಸಿಎಸ್ ಪ್ರೌಢಶಾಲೆ, ಸೇವಾ ಭಾರತಿ ಆಂಗ್ಲ ಮಾಧ್ಯಮ ಮತ್ತು ಸೇವಾ ಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆ, ಮಲ್ಲಯ್ಯನಪುರ ಆದರ್ಶ ವಿದ್ಯಾಲಯ, ಜೆಎಸ್‌ಎಸ್ ಬಾಲಕರು ಮತ್ತು ಬಾಲಕಿಯರ ಪ್ರೌಢಶಾಲೆ ಹಾಗೂ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜು ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ನಂಜುಂಡಯ್ಯ ನೇತೃತ್ವದ ಜಿಲ್ಲಾ ಬ್ಯಾಂಡ್‌ವೃಂದ ಪಥ ಸಂಚಲನಕ್ಕೆ ಮತ್ತಷ್ಟು ಮೆರುಗು ತುಂಬಿತು.

ಆಕರ್ಷಕ ನೃತ್ಯ ರೂಪಕ:
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜೀವನ ಸಾರ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಸತ್ವವನ್ನು ಒಳಗೊಂಡಂತೆ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ರೂಪಕ ಗಮನ ಸೆಳೆಯಿತು. ಸಂತ ಜೋಸ್ೆ ಪ್ರೌಢಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಡಾ.ಅಂಬೇಡ್ಕರ್ ಜೀವನ ಚರಿತ್ರೆ ಸಾರುವ ನೃತ್ಯರೂಪಕ ನೋಡುಗರ ಗಮನ ಸೆಳೆಯಿತು. ಆದರ್ಶ ಶಾಲೆಯ ವಿದ್ಯಾರ್ಥಿಗಳು ನೃತ್ಯದ ಮೂಲಕ ದೇಶಭಕ್ತಿ ಯ ಅರಿವು ಮೂಡಿಸಿದರು. ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಬಂಜಾರ ಇಂಡಿಯನ್ ಪ್ರೌಢಶಾಲೆ ವಿದ್ಯಾರ್ಥಿಗಳು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಅಮಚವಾಡಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೃತ್ಯದ ಮೂಲಕ ಸಂವಿಧಾನದ ಪೀಠಿಕೆ ಮಹತ್ವವನ್ನು ಸಾರಿದರು. ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಬ್ಯಾಂಡ್‌ವಾದನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಹಲವರಿಗೆ ಸನ್ಮಾನ:
75ನೇ ಗಣರಾಜ್ಯೋತ್ಸವದ ಅಂಗವಾಗಿ 2023ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ ಮಾಡಲಾಯಿತು. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಅಂಗವಿಕಲ ಮಕ್ಕಳು ಮತ್ತು ರಾಜ್ಯ ಮಟ್ಟದ ಸಾವಯವ, ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕೃಷಿಕ ಆರ್.ಮಹೇಶ್ ಹಾಗೂ ಶೃತಿ ಅವರನ್ನು ಸನ್ಮಾನಿಸಲಾಯಿತು. ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉತ್ತಮ ಸಾಧನೆ ಮಾಡಿದ 5 ಆಸ್ಪತ್ರೆಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net