ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿಬಲಿ ನಿಲ್ಲಲಿ

Dayananda Swamiji
Published on

ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯಲ್ಲಿ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದಸ್ವಾಮಿ ಮನವಿ ಮಾಡಿದರು.

ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿಬಲಿ ತಡೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವ್ಯಾಪಕ ಪ್ರಚಾರ ಮತ್ತು ಬಂದೋಬಸ್ತ್ ಮಾಡಿಕೊಂಡಿರುವುದು ಅಭಿನಂದನಾರ್ಹ. ದೇವಾಲಯಗಳು ದಿವ್ಯಾಲಯಗಳಾಗಬೇಕೆ ಹೊರತು ಕಟುಕರ ಕೇರಿ ಆಗಬಾರದು. ಅಹಿಂಸೆ, ಕರುಣೆ, ಪ್ರೇಮ, ಜೀವದಯೆ, ಮಾನವೀಯತೆಯನ್ನು ಭಕ್ತಾದಿಗಳು ಅಳವಡಿಸಿಕೊಂಡು ಸಾಗಬೇಕು. ಜಾತ್ರೆಯನ್ನು ಪ್ರಾಣಿಬಲಿ ಮುಕ್ತ, ರಕ್ತಮುಕ್ತ ಹಾಗೂ ಜೀವಹಿಂಸೆ ಮುಕ್ತ ಜಾತ್ರೆಯನ್ನಾಗಿ ರೂಪಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಚಿಕ್ಕಲ್ಲೂರು ಶ್ರೀಸಿದ್ದಪ್ಪಾಜಿ ಜಾತ್ರೆಯಲ್ಲಿ ಹೈಕೋರ್ಟ್ ಆದೇಶದಂತೆ ಸಂಪೂರ್ಣವಾಗಿ ಪ್ರಾಣಿಬಲಿಯನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಅದಾಗ್ಯೂ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧ ಮಾಡಿರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಒಂದು ವಾರಗಳ ಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾಗೂ ಚಿಕ್ಕಲ್ಲೂರು ಶ್ರೀಸಿದ್ದಪ್ಪಾಜಿ ಜಾತ್ರಾ ಪರಿಸರ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಅಹಿಂಸಾ ಪ್ರಾಣಿದಯಾ-ಆಧ್ಯಾತ್ಮ ಸಂದೇಶಯಾತ್ರೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net