ಚುರುಕಾಗಿದೆ ಬೆಂಕಿರೇಖೆ ಕಾಮಗಾರಿ

Published on

ಯಳಂದೂರು: ಬೇಸಿಗೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಫೈರ್‌ಲೈನ್ ಕಾಮಗಾರಿಯು ಸಮರೋಪಾದಿಯಲ್ಲಿ ಸಾಗಿದೆ. ಕಾಳ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೆಲವು ದಿನಗಳಿಂದ ಬಿಆರ್‌ಟಿ ಅರಣ್ಯ ಪ್ರದೇಶದ ಯಳಂದೂರು ಹಾಗೂ ಕೆ.ಗುಡಿ ವಲಯದ ವ್ಯಾಪ್ತಿಯ 440 ಕಿ.ಮೀ. ರಸ್ತೆಯ ಎರಡು ಬದಿಯಲ್ಲಿ ಬೆಳೆದಿರುವ 10 ಮೀಟರ್ ಉದ್ದದವರೆಗೂ ಬೆಳೆದಿರುವ ಗಿಡಗಂಟಿ, ಹುಲ್ಲುಗಳನ್ನು ಕಾಂಡದ ತನಕ ಕತ್ತರಿಸಿ ಬಳಿಕ ಕಾಂಡಕ್ಕೆ ಬೆಂಕಿ ಹಾಕಿ ಸುಡಲಾಗುತ್ತದೆ. ಬಳಿಕ ಆ ಜಾಗಕ್ಕೆ ಬೆಂಕಿ ಹಚ್ಚಿ ಸುಡುವ ಮೂಲಕ ಫೈರ್‌ಲೈನ್ ಮಾಡಲಾಗುತ್ತದೆ. ಇದರಿಂದ ಕಾಡ್ಗಿಚ್ಚು ನಿಯಂತ್ರಿಸುವ ಜತೆಗೆ ರಸ್ತೆ ದಾಟಲು ಬರುವ ಪ್ರಾಣಿಗಳು ವಾಹನಗಳಿಗೆ ಸಿಲುಕುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾಗಿದೆ. ಈಗಾಗಲೆ ಕಳೆದ ಹಲವು ದಿನಗಳಿಂದ ಸುಮಾರು 80 ಜನರು ಪ್ರತಿನಿತ್ಯ ಕೆಲಸವನ್ನು ಮಾಡುತ್ತಿದ್ದಾರೆ.

ಹಾಡಿಗಳಲ್ಲಿ ಜಾಗೃತಿ
ಬಿಆರ್‌ಟಿ ಅರಣ್ಯ ಪ್ರದೇಶದ ವ್ಯಾಪ್ತಿಯ ಸೋಲಿಗರ ಪೋಡಿಗಳಲ್ಲಿ ಸಭೆಗಳನ್ನು ಮಾಡಿ ಆ ಮೂಲಕ ಬೇಸಿಗೆಯಲ್ಲಿ ಸಂಭವಿಸುವ ಕಾಳ್ಗಿಚ್ಚು ನಿಯಂತ್ರಣ ಸಂಬಂಧಪಟ್ಟ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜತೆಗೆ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ಸವಾರರಿಗೂ ಅರಿವು ಮೂಡಿಸುವ ಕೆಲಸವನ್ನು ಮಾಡಿ ಹೆಚ್ಚಿನ ನಿಗಾ ವಹಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ ಎಂದು ಯಳಂದೂರು ವಲಯದ ಆರ್‌ಎಫ್‌ಒ ನಾಗೇಂದ್ರ ನಾಯಕ ಮಾಹಿತಿ ನೀಡಿದರು.

ಅಪರೂಪದ ಕಾಡು: ಈ ಪ್ರದೇಶವು ಪೂರ್ವ ಹಾಗೂ ಪಶ್ಚಿಮ ಘಟ್ಟ ಸಂಧಿಸುವ ಜಾಗ. ಇಲ್ಲಿ ಅಪರೂಪದ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿವೆ. ಕಳೆದೆರಡು ವರ್ಷಗಳಲ್ಲಿ ಮಳೆ ಹೆಚ್ಚಾಗಿದ್ದ ಕಾರಣ ಎಲ್ಲೆಲ್ಲೂ ನೀರಿನ ಒರತೆ ಇತ್ತು. ಇಲ್ಲಿನ ಬಹುತೇಕ ಕೆರೆಕಟ್ಟೆಗಳು ತುಂಬಿದ್ದವು. ಈ ಅವಧಿಯಲ್ಲಿ ಕಾಳ್ಗಿಚ್ಚಿನ ಪ್ರಮಾಣವೂ ಕಡಿಮೆ ಇತ್ತು. ಆದರೆ ಈ ಬಾರಿ ಪರಿಸ್ಥಿತಿ ಹೀಗಿಲ್ಲ. ಕಾಡಿನ ಒಳಗಿರುವ ಬಹುತೇಕ ಕೆರೆ, ಕಟ್ಟೆಗಳಲ್ಲಿ ನೀರು ಖಾಲಿಯಾಗುತ್ತ ಬಂದಿದೆ. ಈ ಬಾರಿ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಮರೋಪಾದಿಯಲ್ಲಿ ಫೈರ್‌ಲೈನ್ ನಿರ್ಮಾಣದ ಕೆಲಸವನ್ನು ಆರಂಭಿಸಿದೆ.

ವಿಭಿನ್ನ ಸಸ್ಯ ಸಂಪತ್ತು: ಶೋಲಾ, ನಿತ್ಯ ಹರಿದ್ವರ್ಣ, ಅರೆನಿತ್ಯ ಹರಿದ್ವರ್ಣ, ಎಲೆ ಉದುರುವ ಕಾಡು ಸೇರಿದಂತೆ 6 ವಿಭಿನ್ನ ಸಸ್ಯ ವರ್ಗಗಳ ಪ್ರಭೇದ ಹೊಂದಿರುವ ಅಪರೂಪದ ಕಾಡು ಇದಾಗಿದೆ. ಪೂರ್ವ ಹಾಗೂ ಪಶ್ಚಿಮ ಘಟ್ಟಗಳು ಸಂಧಿಸುವ ಬೆಟ್ಟ ಇದಾಗಿರುವುದರಿಂದ ಇಲ್ಲಿ ಭಿನ್ನ ಪರಿಸರವನ್ನು ಕಾಣಬಹುದು. ಸಾಮಾನ್ಯವಾಗಿ ಎಲೆ ಉದುರುವ ಕಾಡಿನಲ್ಲಿ ಈಗಾಗಲೇ ಮರಗಳಲ್ಲಿ ಎಲೆ ಉದುರುತ್ತಿವೆ. ಮುಖ್ಯ ರಸ್ತೆಯ ಬದಿಗಳು, ಕಾಡಿನೊಳಗಡೆ ಇರುವ ಗೇಮ್ ರಸ್ತೆ, ಪೋಡುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಬೆಂಕಿ ರೇಖೆಯನ್ನು ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಿದೆ. ಇದಕ್ಕೆ ಪರಿಣತಿ ಹೊಂದಿದ ಸಿಬ್ಬಂದಿ ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಯಳಂದೂರು ಹಾಗೂ ಕೆ.ಗುಡಿ ವಲಯದಲ್ಲಿ ಫೈರ್‌ಲೈನ್ ಕಾಮಗಾರಿ ಬಿರುಸು ಪಡೆದುಕೊಂಡಿದೆ.

ಹೆಚ್ಚು ಪ್ರವಾಸಿಗರು ಭೇಟಿ:
ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಯಳಂದೂರು ಹಾಗೂ ಕೆ.ಗುಡಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಿಳಿಗಿರಿರಂಗನಬೆಟ್ಟದ ದೇವಸ್ಥಾನ ಸಂದರ್ಶಿಸಲು ಹಾಗೂ ಕೆ.ಗುಡಿಯಲ್ಲಿರುವ ಸಫಾರಿಯನ್ನು ಆಸ್ವಾದಿಸಲು ದಿನನಿತ್ಯ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದಕ್ಕಾಗಿಯೇ ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಬೆಂಕಿ ಅವಘಡಗಳನ್ನು ತಪ್ಪಿಸಲು ವಿಶೇಷ ಕಾಳಜಿ ವಹಿಸಿದೆ. ಬೆಂಕಿ ರೇಖೆ ನಿರ್ಮಾಣ, ಈ ಸ್ಥಳದಲ್ಲಿ ಬೇಸಿಗೆ ಮುಗಿಯುವವರೆಗೂ ರಸ್ತೆಯಲ್ಲಿ ತನ್ನ ಸಿಬ್ಬಂದಿಯನ್ನು ನೇಮಿಸುತ್ತದೆ.

ಈಗಾಗಲೇ ನಾವು ಬೆಂಕಿ ರೇಖೆಯನ್ನು ಬಿಆರ್‌ಟಿ ವಲಯದಲ್ಲಿ ಆರಂಭಿಸಿದ್ದೇವೆ. ಒಟ್ಟು ನಮ್ಮ ವ್ಯಾಪ್ತಿಯಲ್ಲಿ 220 ಕಿ.ಮೀ. ಫೈರ್‌ಲೈನ್ ಮಾಡಲಾಗುವುದು. ಬೆಂಕಿ ಅವಘಡಗಳನ್ನು ತಪ್ಪಿಸುವ ಸಲುವಾಗಿ ಈಗಾಗಲೇ ಅಗತ್ಯ ಕ್ರಮಗಳನ್ನು ವಹಿಸಿದ್ದೇವೆ. ಬೀದಿ ನಾಟಕಗಳನ್ನು ಮಾಡುವ ಮೂಲಕ ಸ್ಥಳೀಯ ಪೋಡುಗಳು ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಕಾಳ್ಗಿಚ್ಚಿನಿಂದಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಸಿಬ್ಬಂದಿಯನ್ನು ಈಗಾಗಲೇ ಎಚ್ಚರಿಕೆಯಿಂದ ಕಾಡನ್ನು ಬೆಂಕಿಯಿಂದ ರಕ್ಷಿಸಲು ಸೂಚನೆ ನೀಡಲಾಗಿದೆ. ಸ್ಥಳೀಯರು ನಮಗೆ ಸಹಕಾರ ನೀಡಿದರೆ ನಮ್ಮ ಕಾಡನ್ನು ಬೆಂಕಿ ಅವಘಡಗಳಿಂದ ರಕ್ಷಿಸುವ ಕೆಲಸ ಸುಲಭವಾಗುತ್ತದೆ.ವಿನೋದ್‌ಗೌಡ, ಆರ್‌ಎಫ್‌ಒ, ಕೆ.ಗುಡಿ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net