ಹುಟ್ಟೂರಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಶಾಲೆ

24chn10
Published on

ಚಾಮರಾಜನಗರ: ತನ್ನೂರಿನ ಸರ್ಕಾರಿ ಶಾಲೆಯನ್ನು ನಿವೃತ್ತ ಪೊಲೀಸ್ ಮಹಾ ನಿರ್ದೇಶಕರೊಬ್ಬರು ದತ್ತು ಪಡೆದು ಬರೋಬ್ಬರಿ 2 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಿ ಉದ್ಘಾಟನೆಗೆ ಸಜ್ಜುಗೊಳಿಸಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿರುವ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ, ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಛೇರ್ಮನ್ ಎಸ್.ಮರಿಸ್ವಾಮಿ ಹೊಸ ಕಳೆ ತಂದಿದ್ದಾರೆ. ಈ ಗ್ರಾಮದ ಮಧ್ಯೆ ಶಾಲೆ ಇದ್ದು, ಹಳೆಯ ಶಾಲೆಯ ಕೊಠಡಿಗಳನ್ನು ನೆಲಸಮ ಮಾಡಿಸಿ ಅಂದಾಜು 2 ಕೋಟಿ ರೂ.ಗಳಲ್ಲಿ ನೆಲಹಂತದಲ್ಲಿ 6 ಮತ್ತು ಮೊದಲ ಮಹಡಿಯಲ್ಲಿ 6 ಸೇರಿ ಒಟ್ಟು 12 ತರಗತಿ ಕೊಠಡಿಗಳು, ಬಾಲಕರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಗೃಹಗಳನ್ನು ಕಟ್ಟಿಸಿದ್ದಾರೆ. ಇದಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ದಾನಿಗಳು ಶೇ.20ರಷ್ಟು ಸಾಥ್ ಕೊಟ್ಟಿದ್ದರೆ, ಶೇ.80ರಷ್ಟು ಕೊಡುಗೆಯನ್ನು ಎಸ್.ಮರಿಸ್ವಾಮಿ ಅವರೇ ನೀಡಿದ್ದಾರೆ. ಇವರ ಶ್ರಮದಿಂದ ಸುಸಜ್ಜಿತವಾಗಿ ತಲೆ ಎತ್ತಿರುವ ನೂತನ ಶಾಲಾ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಉದ್ಘಾಟನೆ ಮಾಡಿಸಬೇಕೆಂದು ಕಾಯಲಾಗುತ್ತಿದೆ.

ಶಿಕ್ಷಣ ಇಲಾಖೆ ಪ್ರಸ್ತುತ ‘ನನ್ನ ಶಾಲೆ-ನನ್ನ ಜವಾಬ್ದಾರಿ’ ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ಶಾಲೆಯ ದಾನಿಗಳು, ಹಳೆಯ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರ ನೆರವು ಪಡೆದು ಶಾಲೆಯನ್ನು ಅಭಿವೃದ್ಧಿಪಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಇದಕ್ಕೆ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದಾರೆ. ಸಚಿವರು ಹೇಳುತ್ತಿರುವ ಈ ‘ನನ್ನ ಶಾಲೆ-ನನ್ನ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಸತ್ತೇಗಾಲದಲ್ಲಿ ಎಸ್.ಮರಿಸ್ವಾಮಿ ಅಭಿವೃದ್ಧಿಪಡಿಸಿರುವ ಸರ್ಕಾರಿ ಶಾಲೆ ಮಾದರಿ ಎನ್ನಬಹುದು.

ರಿಪೇರಿ ಬದಲು ಹೊಸ ಕಟ್ಟಡಗಳ ನಿರ್ಮಾಣ:ಸತ್ತೇಗಾಲದಲ್ಲಿ 1962ರಲ್ಲಿ ಸರ್ಕಾರಿ ಶಾಲೆ ನಿರ್ಮಾಣಗೊಂಡಿತ್ತು. ಇದಕ್ಕಾಗಿ ಚಿಕ್ಕವೆಂಕಟೇಗೌಡರು ಭೂಮಿ ದಾನ ಮಾಡಿದ್ದರು. ಇಲ್ಲಿ ಒಟ್ಟು 12 ಕೊಠಡಿಗಳು ಇದ್ದವು. ಈ ಶಾಲೆ ಆರಂಭಗೊಳ್ಳುವ ಮೊದಲು ಇದ್ದ ಇನ್ನೊಂದು ಸರ್ಕಾರಿ ಶಾಲೆಯಲ್ಲಿ ಸಿದ್ದಯ್ಯ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರ ಎಸ್.ಮರಿಸ್ವಾಮಿ ವ್ಯಾಸಂಗ ಮಾಡಿದ್ದರು. ಬಳಿಕ ಬೇರೆ ಬೇರೆ ಕಡೆಗಳಲ್ಲಿ ಶಿಕ್ಷಣ ಪಡೆದು ಪೊಲೀಸ್ ಮಹಾನಿರ್ದೇಶಕರಾಗಿ ಉನ್ನತ ಹುದ್ದೆಗೇರಿದ್ದರು. ಆದರೂ ತಮ್ಮೂರಿನ ಸರ್ಕಾರಿ ಶಾಲೆಯನ್ನು ಮರೆಯದೆ ಇದರ ಅಭಿವೃದ್ಧಿಗಾಗಿ ವರ್ಷಕ್ಕೆ ಇಂತಿಷ್ಟು ಹಣವನ್ನು ನೀಡುತ್ತಿದ್ದರು. ಶಿಥಿಲಗೊಂಡಿದ್ದ ಕಟ್ಟಡ, ಮಳೆ ಬಂದರೆ ಸೋರುತ್ತಿದ್ದ ಛಾವಣಿ ನೋಡಿ 10 ಲಕ್ಷ ರೂ. ವೆಚ್ಚದಲ್ಲಿ ರಿಪೇರಿ ಮಾಡಿಸಲು ನಿರ್ಧರಿಸಿದರು. ನಂತರ ಕೊಠಡಿ ರಿಪೇರಿ ಬದಲು ಹೊಸ ಕಟ್ಟಡವನ್ನೇ ನಿರ್ಮಾಣ ಮಾಡಲು ತೀರ್ಮಾನಿಸಿದರು. ಇಂಜಿನಿಯರ್ ಇದಕ್ಕೆ ತಗುಲುವ ವೆಚ್ಚ 2 ಕೋಟಿ ರೂ. ಎಂದರೂ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕಿಡದೆ ಹೊಸ ಕಟ್ಟಡ ನಿರ್ಮಾಣ ಮಾಡಿಸಿದ್ದಾರೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 210 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಹಳೆಯ ಕಟ್ಟಡ ಕೆಡವಿರುವುದರಿಂದ ಹೊಸ ಕಟ್ಟಡದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಅಧಿಕೃತವಾಗಿ ಕಟ್ಟಡವನ್ನು ಉದ್ಘಾಟನೆ ಮಾಡಲು ಸಜ್ಜುಗೊಳಿಸಲಾಗಿದೆ.

ಹಳೆಯ ವಿದ್ಯಾರ್ಥಿಗಳಿಂದ ಸಾಧ್ಯ
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಒಟ್ಟು 206 ಸರ್ಕಾರ ಶಾಲೆಗಳು ಶಿಥಿಲಗೊಂಡಿವೆ. ಮಳೆ ಹಾನಿಯಿಂದ 108 ಶಾಲೆಗಳು ಹಾಳಾಗಿವೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವಂತೆ ಹಳೆಯ ವಿದ್ಯಾರ್ಥಿ ಮನಸ್ಸು ಮಾಡಿದರೆ ಶಾಲೆಯೊಂದು ಅಭಿವೃದ್ಧಿಯಾದಂತೆ.

ನಮ್ಮ ಶಾಲೆಯ ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಛಾವಣಿಯಲ್ಲಿ ಹಾಕಿದ್ದ ಹೆಂಚು ಹಾಳಾಗಿತ್ತು. ಮಳೆ ಬಂದರೆ ಕೊಠಡಿಯಲ್ಲಿ ನೀರು ಸೋರುತ್ತಿತ್ತು. ಈಗ ಎಸ್.ಮರಿಸ್ವಾಮಿ ಅವರು ಶಾಲೆಗೆ ನೂತನ ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟು ಮಾದರಿಯಾಗಿದ್ದಾರೆ. ಹಳೆಯ ವಿದ್ಯಾರ್ಥಿಗಳು ತಟ್ಟೆ, ಲೋಟ, ಡೆಸ್ಕ್, ಬೋರ್ಡ್ ನೀಡಿದ್ದಾರೆ.ಹೂವಮ್ಮ, ಮುಖ್ಯಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸತ್ತೇಗಾಲ, ಕೊಳ್ಳೇಗಾಲ ಸತ್ತೇಗಾಲದಂತ ದೊಡ್ಡ ಹಳ್ಳಿಗೆ ಚಿಕ್ಕ ಮತ್ತು ಕೆಟ್ಟದಾದ ಶಾಲೆ ಇತ್ತು. ಈ ಶಾಲೆಯನ್ನು ರಿಪೇರಿ ಮಾಡಿಸಲು ನಿರ್ಧರಿಸಿದ್ದೆ. ಆದರೆ ಅಂತಿಮವಾಗಿ ಹೊಸ ಕಟ್ಟಡ ನಿರ್ಮಾಣ ಮಾಡಿದೆವು. ಹೊಸ ಕಟ್ಟಡ ತುಂಬಾ ಚೆನ್ನಾಗಿ ನಿರ್ಮಾಣವಾಗಿದೆ. ಇದನ್ನು ಉದ್ಘಾಟನೆ ಮಾಡಿಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಳಿಕೊಂಡಿದ್ದೇವೆ. ಸದ್ಯದಲ್ಲೇ ಅವರು ದಿನಾಂಕ ನೀಡಲಿದ್ದಾರೆ.ಎಸ್.ಮರಿಸ್ವಾಮಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net