ಗಣರಾಜ್ಯೋತ್ಸವಕ್ಕೆ ನಾಗರಾಜು ದಂಪತಿಗೆ ಆಹ್ವಾನ

NGARAJAU, RAJESHWARI
Published on

ಕೊಳ್ಳೇಗಾಲ: ನವದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ನಾಗರಾಜು ಹಾಗೂ ಅವರ ಪತ್ನಿ ರಾಜೇಶ್ವರಿ ಅವರಿಗೆ ಕೇಂದ್ರ ಸಹಕಾರ ಸಚಿವಾಲಯದಿಂದ ಅಧಿಕೃತ ಆಹ್ವಾನ ಬಂದಿದೆ.

ಬಿ.ನಾಗರಾಜು ಕಳೆದ 28 ವರ್ಷಗಳಿಂದ ಸಹಕಾರ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರಿಗೆ ಉತ್ತಮ ಸೇವೆ ನೀಡುತ್ತ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಸಹಕಾರ ಇಲಾಖೆಯಲ್ಲಿ ಉತ್ತಮ ಸಾಧನೆಗೈದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಹಕಾರ ಸಚಿವ ಅಮಿತಾ ಷಾ ಪ್ರಥಮ ಬಾರಿಗೆ ಸಹಕಾರ ಇಲಾಖೆಯ ನೌಕರರನ್ನು ಗಣರಾಜೋತ್ಸವ ಪೆರೆಡ್ ವೀಕ್ಷಿಸಲು ಆಹ್ವಾನಿಸಿದ್ದಾರೆ. ಜ.25 ರಂದು ಬಿ.ನಾಗರಾಜು ದಂಪತಿ ಸಮೇತರಾಗಿ ಪ್ರಯಾಣ ಬೆಳೆಸಲಿದ್ದಾರೆ. ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂತೆಯೇ, ಜ.27ರಂದು ಸಹಕಾರ ಸಚಿವ ನಿವಾಸದಲ್ಲಿ ಏರ್ಪಡಿಸಿರುವ ಚಹಾ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಬಿ.ನಾಗರಾಜು ಮಾತನಾಡಿ, ಸಹಕಾರ ಸಂಘದ ನೌಕರರ ಸೇವೆಯನ್ನು ಪರಿಗಣಿಸಿ ಕೇಂದ್ರ ಸಹಕಾರ ಸಚಿವರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಖುಷಿ ತಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net