

ಚಾಮರಾಜನಗರ :ಮಕ್ಕಳಿಗೆ ಪಠ್ಯದ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕೌಶಲಾಧಾರಿತ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಶ್ರೀ ಶಿವರಾತ್ರಿ ರಾಜೇಂದ್ರ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಕ್ಷಯ್‌ಮಲ್ಲಪ್ಪ ತಿಳಿಸಿದರು.
ತಾಲೂಕಿನ ಕಾಗಲವಾಡಿ ಗ್ರಾಮದ ವಿಭ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಭೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ಮಕ್ಕಳಿಗೆ ಹಣ್ಣು, ತರಕಾರಿ ಎಲ್ಲಿಂದ ಬರುತ್ತವೆ? ಅವುಗಳನ್ನು ಬೆಳೆಯುವ ವಿಧಾನ ಹೇಗೆ? ಎಂಬ ಪ್ರಾಥಮಿಕ ಜ್ಞಾನದ ಕೊರತೆ ಇದೆ. ಪಟ್ಟಣ ಪ್ರದೇಶದ ಮಕ್ಕಳಲ್ಲಿ ಈ ಕೊರತೆ ಹೆಚ್ಚು. ಹೀಗಾಗಿ ಶಾಲೆಯಲ್ಲಿ ಪಠ್ಯ ಬೋಧನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಅವರ ಕೈಯಲ್ಲಿ ಹೂವಿನ ತೋಟ, ತರಕಾರಿ ತೋಟ, ಹಣ್ಣಿನ ಗಿಡಗಳು, ವಿವಿಧ ಜಾತಿಯ ಸೊಪ್ಪುಗಳನ್ನು ಬೆಳೆಯುವಂತೆ ಪ್ರೋತ್ಸಾಹ ನೀಡಬೇಕು ಎಂದರು.
ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಂಯೋಜಕ ನಾಗೇಂದ್ರ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಇತರ ಮಕ್ಕಳ ಜತೆಗೆ ಹೋಲಿಕೆ ಮಾಡಬೇಡಿ. ಅವರ ಪ್ರತಿಭೆಯಲ್ಲಿ ನಂಬಿಕೆ ಇಟ್ಟು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್‌ಡಿವಿಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಿ.ವೀರಭದ್ರಪ್ಪ ದುಗ್ಗಟ್ಟಿ, ವಿಭ ಶಾಲೆಯ ಅಧ್ಯಕ್ಷ ವಿ. ಮಲ್ಲಿಕಾರ್ಜುನಸ್ವಾಮಿ ದುಗ್ಗಟ್ಟಿ, ಮುಖ್ಯಶಿಕ್ಷಕಿ ಯಮುನಾ, ಸಹ ಶಿಕ್ಷಕ ಮಧು , ಮಧುಶ್ರೀ, ಸವಿತಾ, ಸೌಮ್ಯಾ, ಭಾಗ್ಯಲಕ್ಷ್ಮೀ, ಮಹೇಶ್ವರಿ ಉಪಸ್ಥಿತರಿದ್ದರು.