ರಾಜ್ಯ ಸರ್ಕಾರದ ತೀರ್ಮಾನಕ್ಕೆ ಸ್ವಾಗತ

Published on

ಚಾಮರಾಜನಗರ: ಮಾದಿಗ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿರುವ ಕ್ರಮವನ್ನು ರಾಜ್ಯದ ಮಾದಿಗ ಸಮಾಜ ಮತ್ತು ಜಿಲ್ಲಾ ಡಾ.ಬಾಬು ಜಗಜೀವನರಾಮ್ ಯುವ ಜಾಗೃತಿ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಾಜಿ ನಿರ್ದೇಶಕ ಎಂ.ಶಿವಮೂರ್ತಿ ತಿಳಿಸಿದರು.

ಮಾದಿಗ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕವಾಗಿ ತೀರ ಹಿಂದುಳಿದಿದ್ದು, ಅತ್ಯಂತ ಕನಿಷ್ಠ ಜೀವನ ಸಾಗಿಸುತ್ತಿದೆ. ಎಲ್ಲ ಹಂತದಲ್ಲಿಯೂ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿದೆ. ಈ ಅಸಮಾನತೆಯ ವಿರುದ್ಧ ಕಳೆದ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಇದು ದೇಶಕ್ಕೆ ಗೊತ್ತಿರುವ ವಿಚಾರವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂವಿಧಾನಬದ್ಧ ಸವಲತ್ತುಗಳನ್ನು ಪಡೆದುಕೊಳ್ಳುವುದು, ಅದಕ್ಕಾಗಿ ಹೋರಾಟ ಮಾಡುವುದು ನಮ್ಮ ಹಕ್ಕು ಆಗಿದೆ. ನಮ್ಮನ್ನು ಆಳಿದ ಸರ್ಕಾರಗಳು ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯ ಮಾಡಿಕೊಂಡು ಬಂದಿವೆ. ಹಿಂದಿನ ಬಿಜೆಪಿ ಸರ್ಕಾರ ಕಳೆದ ವರ್ಷ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುದಾಗಿ ಹೇಳಿ ಎಸ್‌ಸಿಗೆ ಶೇ.17, ಎಸ್‌ಟಿಗೆ ಶೇ.7ರಷ್ಟು ಮೀಸಲಾತಿ ಹೆಚ್ಚು ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಪ್ರಚಾರಗಿಟ್ಟಿಸಿಕೊಂಡಿತ್ತೇ ಹೊರತು ಒಳ ಮೀಸಲಾತಿ ವರ್ಗೀಕರಣದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಈಗ ಒಳ ಮೀಸಲಾತಿ ಜಾರಿ ಮಾಡುವುದಾಗಿ ಉಪ ಸಮಿತಿ ರಚಿಸಿದ್ದಾರೆ. ಇದರ ಬದಲು ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಲೋಕಸಭೆ ಅಧಿವೇಶನದಲ್ಲಿ ಚರ್ಚೆಗೆ ತಂದು ಆರ್ಟಿಕಲ್ 341 ತಿದ್ದುಪಡಿ ಮಾಡಿ ಒಳ ಮೀಸಲಾತಿ ಜಾರಿಗೊಳಿಸಬಹುದು. ಉಪ ಸಮಿತಿ ನೆಪಹೇಳಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾದಿಗರ ಮತ ಸೆಳೆಯುವ ತಂತ್ರವಾಗಬಾರದು ಎಂದರು. ಗುಂಡ್ಲುಪೇಟೆ ನಿಟ್ರೆ ಮಹದೇವಯ್ಯ, ಕೊಳ್ಳೇಗಾಲ ಬಿ.ಬಾಲರಾಜು, ಸಿ.ಸೋಮು, ರಾಚಪ್ಪಪಾಳ್ಯ, ಸೋಮಶೇಖರ್, ಗ್ರಾ.ಪಂ.ಸದಸ್ಯ ಗೋವಿಂದ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net