ಕಾಂತರಾಜ್ ವರದಿ ಜಾರಿಗೆ ಒತ್ತಡ

23 yelandur 02
Published on

ಯಳಂದೂರು: ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಮಂಗಲ ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಈ ಸಂಬಂಧ ಸಂತೆಮರಹಳ್ಳಿ ಸಮೀಪದ ಸಭಾಂಗಣದಲ್ಲಿ ಮಂಗಳವಾರ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮಂಗಲ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹಿಂದುಳಿದ ವರ್ಗ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ. ಇದು ದುಡಿಯುವ ವರ್ಗವಾಗಿದೆ. ದೇಶದಲ್ಲಿ ಈ ವರ್ಗದ ಜನಸಂಖ್ಯೆಯೂ ಅಧಿಕವಾಗಿದೆ. ಇವರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ, ಮುಂಬರುವ ದಿನಗಳಲ್ಲಿ ಕಾಂತರಾಜ್ ವರದಿಯನ್ನು ಜಾರಿಗೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯವನ್ನು ಒಕ್ಕೂಟ ಕೈಗೊಳ್ಳಲಿದೆ ಎಂದರು.

ಕಾರ್ಯಾಧ್ಯಕ್ಷ ವೆಂಕಟೇಶ್ ಮಾತನಾಡಿ, ಜಿಲ್ಲೆಯ 5 ತಾಲೂಕುಗಳಲ್ಲೂ ಕಾಯಕ ಸಮಾಜದ ಜನರನ್ನು ಜತೆಗೆ ಕೊಂಡೊಯ್ಯುವ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದವರಿಗೆ ಧ್ವನಿಯಾಗುವ ಕೆಲಸವನ್ನು ಒಕ್ಕೂಟ ಮಾಡಲಿದೆ. ಅಲ್ಲದೆ ಪ್ರತಿ ತಾಲೂಕಿಗೂ ಈ ಒಕ್ಕೂಟವನ್ನು ರಚಿಸಿ ಅದರ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಹೋರಾಟ ಮಾಡಲಾಗುವುದು ಎಂದರು.

ಉಳಿದಂತೆ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ರಾಮಶೆಟ್ಟಿ, ನಟರಾಜ್ ಗೌಡ, ಶಿವಮೂರ್ತಿ ಉಪಾಧ್ಯಕ್ಷರಾಗಿ ವೈ.ಕೆ.ಮೋಳೆ ನಾಗರಾಜು, ಬೂದಿತಿಟ್ಟು ಲಕ್ಷ್ಮಣ್, ವೆಂಕಟರಾಮು, ಅರಸುಶೆಟ್ಟಿ, ಸೋಮಣ್ಣ, ಕಾರ್ಯಕಾರಿಣಿ ಸದಸ್ಯರಾಗಿ ವೆಂಕಟ, ಮಹೇಶ್, ಕೃಷ್ಣ, ಸೋಮಣ್ಣ, ದೊಡ್ಡರಾಜು, ನಾಗರಾಜು ಅವರನ್ನು ಆಯ್ಕೆ ಮಾಡಲಾಯಿತು. ಮುಖಂಡರಾದ ಸೋಮಣ್ಣ ಉಪ್ಪಾರ್, ಮಹೇಶ್, ಕೃಷ್ಣ, ವೈ.ಕೆ.ರಾಜು, ಲೋಕೇಶ್‌ಜಟ್ಟಿ, ಬಸವರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net