

ಚಾಮರಾಜನಗರ: ಆದಿ ಕರ್ನಾಟಕ ಸಮುದಾಯದ ಆಸ್ತಿಯನ್ನು ರಕ್ಷಿಸುವಂತೆ ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯರು ನನ್ನ ಮತ್ತು ಸಂಘದ ಮೇಲೆ ಮಾಡಿದ್ದ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಸ್ಪಷ್ಟನೆ ನೀಡಿದರು.
ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿಯನ್ನು ನನ್ನ ತಮ್ಮನ ಮಕ್ಕಳಿಗೆ ಕ್ರಯಮಾಡಲಾಗಿದೆ ಎಂದು ಕೆಲವರು ಆರೋಪ ಮಾಡಿದ್ದರು. ನಾನು ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷನಾದ ನಂತರ 30*260 ಅಳತೆಗೆ ವಾಣಿಜ್ಯ ಕಟ್ಟಡ ಹಾಗೂ 30*90 ಅಡಿಗಳುಳ್ಳ ನಿವೇಶನದಲ್ಲಿ ಮತ್ತೊಂದು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ನಾನು ಯಾವುದೇ ರೀತಿಯಲ್ಲೂ ಸಂಘದ ಆಸ್ತಿಯನ್ನು ಯಾರ ಹೆಸರಿಗೂ ಪರಬಾರೆ ಮಾಡಿರುವುದಿಲ್ಲ. ಸಂಘ ಮತ್ತು ನಮ್ಮ ಕುಟುಂಬದ ಏಳಿಗೆಯನ್ನು ಸಹಿಸದ ಕೆಲವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಸೇರಿದ ನಗರಸಭಾ ಅಸೇಸ್ ಮೆಂಟ್ ನಂ. 948/914 ರಲ್ಲಿ ಒಟ್ಟು ವಿಸ್ತೀರ್ಣ ಪೂರ್ವ ಪಶ್ಚಿಮ 230 ಅಡಿ, ದಕ್ಷಿಣೋತ್ತರ 260 ಅಡಿಗಳ ನಿವೇಶನದಲ್ಲಿ 1967 ರಲ್ಲಿ ಪುರಸಭಾ ದಾಖಲೆಯಂತೆ ಹಾಸ್ಟೆಲ್ ಕಟ್ಟಡ ಹಾಗೂ ಖಾಲಿ ನಿವೇಶನ ಆಗೆಯೇ ಇದ್ದು, ಯಾರು ಆಸ್ತಿಯನ್ನು ಅತಿಕ್ರಮಿಸಲು ಅವಕಾಶ ನೀಡಿಲ್ಲ. ನನ್ನ ಸಾರ್ವಜನಿಕರ ಜೀವನದಲ್ಲಿ ಸಮುದಾಯದ ಏಳಿಗೆಗೆ ದುಡಿದಿದ್ದೇನೆ ಹೊರತು, ಅನ್ಯಾಯ ಮಾಡುವ ಕೆಲಸ ಮಾಡಿಲ್ಲ. ನನ್ನ ಮೇಲೆ ಆರೋಪ ಮಾಡಿರುವವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದೇನೆ. ಸತ್ಯಕ್ಕೆ ದೂರವಾದ ಆರೋಪಗಳಿಗೆ ಸಮುದಾಯದ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಮುಖಂಡ ಶ್ರೀನಿಧಿ ಕುದರ್ ಮಾತನಾಡಿ, ನಗರದ ಗುರು ರಾಘವೇಂದ್ರ ಚಿತ್ರಮಂದಿರಕ್ಕೆ ಹೋಗುವ ರಸ್ತೆಯಲ್ಲಿರುವ ಸರ್ವೇ ನಂ.295/4ಸಿ ಜಮೀನನ್ನು ಖಾಸಗಿ ವ್ಯಕ್ತಿಗಳಾದ ಮಹೇಶ್ ಕುಮಾರ್ ಮತ್ತು ಶಿವರಾಜು ಅವರಿಂದ ಕ್ರಯಕ್ಕೆ ಪಡೆದಿದ್ದೆವು. ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿಯ ಜಾಗದಲ್ಲಿ ಸದರಿ ಸ್ಥಳವು ಇದ್ದರೆ ಖಾತೆ ಮಾಡಿಕೊಡುವುದು ಬೇಡ ಎಂದು ತಹಸೀಲ್ದಾರ್ ಅವರಿಗೆ ಲಿಖಿತವಾಗಿಯೇ ಹೇಳಿಕೆ ನೀಡಿದ್ದೇವೆ. ಈ ಕುರಿತು ನಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು. ಗೋಷ್ಠಿಯಲ್ಲಿ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಖಜಾಂಚಿ ಸಿ.ಕೆ.ರವಿಕುಮಾರ್, ನಿರ್ದೇಶಕ ರಾಜ್ ಗೋಪಾಲ್, ಮಾಜಿ ನಗರಸಭಾ ಸದಸ್ಯ ರಾಮಸಮುದ್ರ ನಾಗರಾಜು, ಶಿವರಾಜು, ಮಹೇಶ್ ಹಾಜರಿದ್ದರು.