ಕಾಂಗ್ರೆಸ್‌ನಿಂದ ಮಾದಿಗರ ದಿಕ್ಕುತಪ್ಪಿಸುವ ಕೆಲಸ

Published on

ಚಾಮರಾಜನಗರ: ಒಳಮೀಸಲಾತಿ ಜಾರಿ ಮತ್ತು ಅದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಾರಸು ಮಾಡಿರುವುದು ಮಾದಿಗ ಸಮುದಾಯವನ್ನು ದಿಕ್ಕುತಪ್ಪಿಸುವ ಕೆಲಸವಾಗಿದೆ ಎಂದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಆರೋಪಿಸಿದರು.\

ರಾಜ್ಯ ಸರ್ಕಾರ ಒಳಮೀಸಲಾತಿ ಕುರಿತು ಜ. 18ರಂದು ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದ ಮತಗಳನ್ನು ಪಡೆಯುವ ಹುನ್ನಾರವೇ ಹೊರತು, ಸದಾಶಿವ ಆಯೋಗದ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂಬುದಾಗಿದೆ. ಈ ಸರ್ಕಾರಕ್ಕೆ ಒಳಮೀಸಲು ಜಾರಿ ಮಾಡುವ ಕಾಳಜಿ, ಬದ್ಧತೆ ಇಲ್ಲ. ಇದು ಕೇವಲ ಮಾದಿಗ ಸಮಾಜವನ್ನು ಓಲೈಸುವ ತಂತ್ರವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್ ಸರ್ಕಾರಕ್ಕೆ ಸದಾಶಿವ ಆಯೋಗದ ವರದಿ ಜಾರಿಗೆ ತರಬೇಕು ಎನ್ನುವ ಇಚ್ಛಾಶಕ್ತಿ ಇದ್ದಿದ್ದರೆ 2013-18ರವರೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗಲೇ ಮಾಡಬಹುದಿತ್ತು. 2016ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಎಡಗೈ ಸಮುದಾಯದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮಾತನಾಡುತ್ತಾರೆ ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿದರು ಎಂದು ಕುಟುಕಿದರು.

ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿ ಹೆಚ್ಚಳ ಮಾಡಿತ್ತು. ಅದನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಒಳಮೀಸಲಾತಿ ಜಾರಿಗೆ ಶಿಾರಸು ಮಾಡಿತ್ತು. ಈ ವಿಚಾರದಲ್ಲಿ ಒಳಮೀಸಲು ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ಸುಕರಾಗಿದ್ದಾರೆ. ಮಾದಿಗ ಸಮುದಾಯ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡುತ್ತಿರುವುದರಿಂದ ಈ ಸಮಯದಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಾರಸು ಮಾಡುವ ನಾಟಕವಾಡುತ್ತಿದೆ ಎಂದು ಕಿಡಿಕಾರಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಲಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲುವ ಸಾಧ್ಯತೆಗಳು ಇವೆ. ಈ ನಿಟ್ಟಿನಲ್ಲಿ ಹಿರಿತನ ಮತ್ತು ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ನನಗೆ ಅಥವಾ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡ ಬಸವನಪುರ ರಾಜಶೇಖರ್, ಬಸವರಾಜು, ಲಿಂಗರಾಜು, ಶಿವು, ಮರಪ್ಪ, ರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net