ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆ

22chn1
Published on

ಚಾಮರಾಜನಗರ: ಜಿಲ್ಲೆಯಲ್ಲಿರುವ ರೈತರ ಜ್ವಲಂತ ಸಮಸ್ಯೆಗಳು ಹಾಗೂ ಕಾಡಂಚಿನ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ರೈತರು ಬೃಹತ್ ಪಾದಯಾತ್ರೆ ಕೈಗೊಂಡಿದ್ದಾರೆ.
ಚಾಮರಾಜನಗರ, ಹನೂರು, ಗುಂಡ್ಲುಪೇಟೆ, ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಂತೆ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ಜ.23 ರಿಂದ ಜ.26ರವರೆಗೆ ಮಲೆ ಮಹದೇಶ್ವರ ಬೆಟ್ಟದಿಂದ ಜಿಲ್ಲಾ ಕೇಂದ್ರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಗೆ ಜ.23 ರಂದು ಸಾಲೂರು ಮಠದ ಶ್ರೀಶಾಂತಮಲ್ಲಿಕಾರ್ಜುನಸ್ವಾಮಿ ಚಾಲನೆ ನೀಡುವರು. ಕೃಷಿ ವಿಜ್ಞಾನಿ ಡಾ.ಮಂಜುನಾಥ್, ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ.ಗಂಗಾಧರ್ ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯಲ್ಲಿರುವ ರೈತರ ಜ್ವಲಂತಸಮಸ್ಯೆಗಳನ್ನು ಬಗೆಹರಿಸುವುದು, ಕಾಡಂಚಿನ ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಎಂಎಸ್‌ಪಿ ಬೆಲೆ ನಿಗದಿ, ಸಾವಯವ ಬೆಳೆ ಸಂರಕ್ಷಣೆ, ಮಾನವ ಮತ್ತು ಪ್ರಾಣಿ ಸಂಘರ್ಷ, ವೈಜ್ಞಾನಿಕ ಬೆಲೆ ನಿಗದಿ, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ, ಬೆಳೆ ಹಾನಿಗೆ ಪರಿಹಾರ, ಸಾರಿಗೆ ಸೌಲಭ್ಯ ಹಾಗೂ ಇನ್ನಿತರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಸುಮಾರು 120 ಕಿಮೀ ಪಾದಯಾತ್ರೆ ನಡೆಸಲಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಮೂಹಿಕ ನಾಯಕತ್ವದ ರೈತ ಮುಖಂಡರು ಹಾಗೂ ಅಧಿಕಾರಿಗಳ ಅಭಿಪ್ರಾಯವನ್ನು ಲೌಡ್‌ಸ್ಪೀಕರ್‌ನಲ್ಲಿ ಸಂಗ್ರಹಿಸಲಾಗಿದೆ.

ಸಮಸ್ಯೆಗೆ ಸರ್ಕಾರ ಕಿವಿಯಾಗಿಲ್ಲ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈವರೆಗೂ ರೈತರ ಸಮಸ್ಯೆಗಳಿಗೆ ಕಿವಿಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಈವರೆಗೂ ರೈತರ ಸಮಸ್ಯೆಗಳನ್ನು ಚರ್ಚಿಸಲು ಒಂದು ಸಭೆಯನ್ನೂ ಕರೆದಿಲ್ಲ. ನಾವು ಪ್ರತಿಭಟನೆ ಮಾಡಿದಾಗ ಮಾತ್ರ ಬಂದು ಮಾತನಾಡುತ್ತಾರೆಯೇ ವಿನಹ ರೈತರ ಸಮಸ್ಯೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಈವರೆಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ವಿಫಲವಾಗಿದೆ. ಈ ನಿಟ್ಟಿನಲ್ಲಿ 120 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದೇವೆ. ಆಗಲಾದರೂ ನಮ್ಮ ಕಷ್ಟವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಹೊನ್ನೂರು ಪ್ರಕಾಶ್, ಜಿಲ್ಲಾಧ್ಯಕ್ಷ, ಸಾಮೂಹಿಕ ನಾಯಕತ್ವದ ರೈತಸಂಘ, ಚಾಮರಾಜನಗರ

ಹಕ್ಕು ಇಲ್ಲದಂತಾಗಿದೆ
ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಇರುವ ರೈತರು ಸುಮಾರು 40 ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಅದು ಅವರದ್ದೇ ಜಮೀನು ಎನ್ನುವುದಕ್ಕೆ ಸರ್ಕಾರ ಈವರೆಗೂ ಸಾಗುವಳಿ ಚೀಟಿ ನೀಡಿಲ್ಲ. ಅವರ ಮನೆಗಳಿಗೆ ಇ-ಸ್ವತ್ತು ನೀಡಿಲ್ಲ. ನನ್ನ ಜಮೀನು ಮತ್ತು ಮನೆ ಎಂಬುವುದಕ್ಕೆ ಯಾವುದೇ ಹಕ್ಕು ಇಲ್ಲದಂತಾಗಿದೆ. ಅಲ್ಲಿನ ಮಕ್ಕಳು ಶಾಲೆಗೆ ಹೋಗಬೇಕಾದರೆ 5-6 ಕಿಮೀ ನಡೆಯುವ ಪರಿಸ್ಥಿತಿ ಇದೆ. ಈ ಭಾಗದ ಜನರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕೆ.ಪಿ.ಶಿವಸ್ವಾಮಿ, ರೈತ ಮುಖಂಡ, ಸಂತೇಮರಹಳ್ಳಿ

ಮನವರಿಕೆ ಮಾಡಿಕೊಡಲು
ಜಿಲ್ಲೆಯಲ್ಲಿರುವ ರೈತರ ಜ್ವಲಂತ ಸಮಸ್ಯೆಗಳನ್ನು ಹಾಗೂ ಮೂಲಸೌಕರ್ಯ ವಂಚಿತ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರ ಬವಣೆಗಳನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಜ.23ರಂದು ಪಾದಯಾತ್ರೆ ಹೊರಟು ಜ.26 ರಂದು ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಆಚರಣೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ನಮ್ಮ ಹಕ್ಕೊತ್ತಾಯಗಳನ್ನು ಸಲ್ಲಿಸುತ್ತೇವೆ.
ಬಂದಿಗೌಡನಹಳ್ಳಿ ನಟರಾಜ್, ತಾಲೂಕು ಸಂಚಾಲಕ, ಸಾಮೂಹಿಕ ನಾಯಕತ್ವದ ರೈತಸಂಘ, ಚಾಮರಾಜನಗರ

ಬಗೆಹರಿಯದ ರೈತರ ಸಮಸ್ಯೆಗಳು
ಜಿಲ್ಲೆಯಾಗಿ 25 ವರ್ಷ ಸಂದಿದೆ, ಹನೂರು ತಾಲೂಕು ರಚನೆಯಾಗಿ 5-6 ವರ್ಷಗಳಾಗಿವೆ ಆದರೆ ಈವರೆಗೂ ರೈತರ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ. ಮಲೆಮಹದೇಶ್ವರ ಬೆಟ್ಟ ಇನ್ನಿತರ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಹಾಗೂ ಇನ್ನಿತರ ಮೂಲಸೌಕರ್ಯಗಳ ಅರಿವಿಲ್ಲ. ಭಾಗಶಃ ಹಳ್ಳಿಗಳಲ್ಲಿ ಮಕ್ಕಳು ಶಾಲೆಗೆ ಹೋಗಲು ಐದಾರು ಕಿ.ಮೀ ನಡೆದು ಹೋಗುವಂತಹ ಪರಿಸ್ಥಿತಿ ಇದೆ. ಎಷ್ಟೋ ಗ್ರಾಮಗಳಿಗೆ ಸಾರಿಗೆ ಸೌಲಭ್ಯವೇ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ಕಣ್ಣು ತೆರೆಸುವ ಪ್ರಯತ್ನವಾಗಿ ಪಾದಯಾತ್ರೆ ನಡೆಯಲಿದೆ.
ಚಂಗಡಿ ಕರಿಯಪ್ಪ, ರೈತ ಮುಖಂಡ, ಹನೂರು

ಮೂಲಸೌಕರ್ಯ ಕಲ್ಪಿಸಲು ವಿಲ
ಜಿಲ್ಲೆಯಲ್ಲಿರುವ ಸಮಗ್ರ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಮೂಲಸೌಕರ್ಯ ಕಲ್ಪಿಸಲು ವಿಫಲವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ಒತ್ತಡ ತರುವ ಪ್ರಯತ್ನವಾಗಿ ಜ.23 ರಂದು ಮಲೆ ಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಹೊರಡಲಿದ್ದೇವೆ. ಜ.26 ಜಿಲ್ಲಾ ಕೇಂದ್ರಕ್ಕೆ ತಲುಪಿ ಸಮಾವೇಶವನ್ನು ಮಾಡಲಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ನಮ್ಮ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಚರ್ಚಿಸಲಿದ್ದೇವೆ. ಈ ಪಾದಯಾತ್ರೆಗೆ ನಮ್ಮ ಸಂಪೂರ್ಣ ಬೆಂಬಲವಿದೆ.
ಮುಳ್ಳೂರು ಬಸವಣ್ಣ, ರೈತ ಮುಖಂಡ, ಕೊಳ್ಳೇಗಾಲ

ಜ್ವಲಂತ ಸಮಸ್ಯೆಗಳ ಪರಿಹರಿಸಿ
ಬಿಳಿಗಿರಿರಂಗನ ಬೆಟ್ಟ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ರೈತರು ತಮ್ಮ ದೇಶಿ ತಳಿ ಹಸುಗಳನ್ನು ಕಾಡಂಚಿನಲ್ಲಿ ಮೇಯಿಸಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಈ ಭಾಗದ ರೈತರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕಾಡಂಚಿನಲ್ಲಿ ಅಕ್ರಮವಾಗಿ ನಡೆಯುವ ಗಣಿಗಾರಿಕೆಯನ್ನು ಇವರಿಗೆ ನಿಲ್ಲಿಸಲು ಆಗುತ್ತಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಮೂಲಸೌಕರ್ಯವಿಲ್ಲ. ಇಲ್ಲಿನ ರೈತರಿಗೆ ವ್ಯವಸಾಯ ಮಾಡಲು ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಅನೇಕ ಬೇಡಿಕೆಗಳನ್ನು ಇಟ್ಟುಕೊಂಡು ಸಾಮೂಹಿಕ ನಾಯಕತ್ವದಲ್ಲಿ ರೈತರು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.
ಸೋಮಣ್ಣ ಗೌಡಹಳ್ಳಿ, ರೈತ ಮುಖಂಡ, ಯಳಂದೂರು

ಕನಿಷ್ಠ ಬೆಲೆ ನಿಗದಿ ಮಾಡಿ
ಮಲೆ ಮಹದೇಶ್ವರ ಬೆಟ್ಟ ಹಾಗೂ ಇನ್ನಿತರ ಕಾಡಂಚಿನ ಗ್ರಾಮಗಳು ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಇನ್ನಿತರ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ಭಾಗದಲ್ಲಿ ಸೂಕ್ತ ಸಾರಿಗೆ ಸೌಲಭ್ಯವಿಲ್ಲದೇ ಜನರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಯವ ಪದ್ಧತಿಯಲ್ಲಿ ವ್ಯವಸಾಯ ಮಾಡುವ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇಲ್ಲದಂತಾಗಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇಂತಹ ಹಲವಾರು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 500 ಜನ ರೈತರು ಪಾಲ್ಗೊಳ್ಳುತ್ತೇವೆ.
ನಾಗಪ್ಪ ವೀರನಪುರ, ರೈತ ಮುಖಂಡ, ಗುಂಡ್ಲುಪೇಟೆ

ಸಾಮೂಹಿಕ ನಾಯಕತ್ವ
ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿದೆ, ಚಾಮರಾಜನಗರ ಜಿಲ್ಲೆಯಾಗಿ 25 ವರ್ಷಗಳು ಕಳೆದಿದೆ. ಆದಾಗ್ಯೂ ಇಂದಿಗೂ ಕನಿಷ್ಠ ಮೂಲಸೌಕರ್ಯವನ್ನು ಕಾಣದ ಹಳ್ಳಿಗಳು ಇದೆ. ಕಾಡಂಚಿನ ಗ್ರಾಮಗಳ ರೈತರು ನಿತ್ಯವೂ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಈ ಪಾದಯಾತ್ರೆ ಆಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಣಿ ಮಂಚಹಳ್ಳಿ, ರೈತ ಮುಖಂಡ, ಗುಂಡ್ಲುಪೇಟೆ

120 ಕಿಮೀ ಪಾದಯಾತ್ರೆ
ಜಿಲ್ಲೆಯಲ್ಲಿ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ. ಅದಾಗ್ಯೂ ಯಾವುದೇ ಸಮಸ್ಯೆಗಳಿಗೆ ರಾಜಕಾರಣಿಗಳಿಂದ ಅಥವಾ ಅಧಿಕಾರಿಗಳಿಂದ ಪರಿಹಾರ ದೊರೆತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಗೌರವಯುತವಾಗಿ 120 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ದಿನಗಳು ಕಳೆದರೂ ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಿಲ್ಲ. ಕೆರೆಗಳಿಗೆ ನೀರು ತುಂಬಿಸುವುದು, ಬೆಳೆ ಪರಿಹಾರ, ಕನಿಷ್ಠ ಬೆಂಬಲ ಬೆಲೆ ೋಷಣೆ, ಸಾವಯವ ಕೃಷಿಗೆ ಒತ್ತು ನೀಡುವುದು ಹಾಗೂ ಇನ್ನು ಮುಂತಾದ ಬೇಡಿಕೆಗಳನ್ನು ಇಟ್ಟುಕೊಂಡು ಈ ಪಾದಯಾತ್ರೆ ನಡೆಸುತ್ತಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ.
ಎ.ಎಂ.ಶಿವಕುಮಾರ್, ರೈತ ಮುಖಂಡ, ಯಳಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net