ಕುಡಿತದಿಂದ ಕುಟುಂಬಗಳಿಗೆ ಸಂಕಷ್ಟ

20chn7
Published on

ಚಾಮರಾಜನಗರ : ಕುಡಿತದ ಚಟದಿಂದ ಮನೆಗಳಲ್ಲಿ ವಾತಾವರಣ ಹದಗೆಟ್ಟು, ಕುಟುಂಬದವರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಪಾಲಕಿ ಸರಸ್ವತಿ ಹೇಳಿದರು.

ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಶ್ರೀಏಳುಮಲೈ ಮಹದೇಶ್ವರ ಜಾನಪದ ಮತ್ತು ಸೋಬಾನೆ ಕಲಾವಿದರ ಸಂಘ ರಾಮಸಮುದ್ರ ಸಹಯೋಗದಲ್ಲಿ ಜಾಗೃತಿ ದಿನದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಕುಡಿತದ ದುಷ್ಪರಿಣಾಮ ಕುರಿತ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುಡಿತ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ. ಸಂಪಾದಿಸಿದ ಹಣವೆಲ್ಲ ಕುಡಿತಕ್ಕೆ ಹೋಗುತ್ತದೆ. ಇದರಿಂದಾಗಿ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತದೆ. ಕುಡಿತದಿಂದ ಹೆಂಡತಿ, ಮಕ್ಕಳ ಜೀವಕ್ಕೂ ಕುತ್ತು ತಂದಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಈ ನಿಟ್ಟಿನಲ್ಲಿ ಕುಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ತಿಳಿಸಿದರೆ ಬದಲಾವಣೆ ತರಬಹುದು ಎಂದರು.

ನಿಲಯಪಾಲಕರಾದ ಮಮತಾ, ಉಮೇರಾಖಾನಂ, ನಾಟಕ ಉಪನ್ಯಾಸಕ ಶ್ರೀಕಾಂತ್, ಕಲಾವಿದರಾದ ಸಂಘದ ಸಂಸ್ಥಾಪಕ ಅಧ್ಯಕ್ಷೆ ಸುಶೀಲಾ ರಾಮಸಮುದ್ರ, ಕಲಾವಿದರಾದ ರಾಜು ಡ್ರಾಮಾ, ಸಿದ್ದರಾಜು, ಆರ್.ಎಂ.ಅಭಿಷೇಕ್, ಎಸ್.ಜ್ಯೋತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net