ಕೋರಿಕೆ ಮೇರೆಗೆ ಬಸ್ ನಿಲ್ಲಿಸಲು ಮನವಿ

18 yelandur 01
Published on

ಯಳಂದೂರು : ರಾಷ್ಟ್ರೀಯ ಹೆದ್ದಾರಿ 209ರ ಅಂಬಳೆ ಪಾಲ, ಕಂದಹಳ್ಳಿ, ಹೊನ್ನೂರು, ಮೆಲ್ಲಹಳ್ಳಿ ಗೇಟ್‌ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಕೋರಿಕೆ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಬೇಕು ಎಂದು ರೈತ ಸಂಘದ ಸದಸ್ಯರು ಗುರುವಾರ ಚಾಮರಾಜನಗರ ಡಿಪೋ ವ್ಯವಸ್ಥಾಪಕ ಕುಮಾರನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ವಿವಿಧ ಕೆಲಸಗಳಿಗೆ ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಇತರೆ ಭಾಗಗಳಿಗೆ ತೆರಳಬೇಕಾಗಿದೆ. ಆದರೆ, ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರಿಗೆ ನಿಲ್ಲಿಸದೆ ತೆರಳುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಪ್ರಯಾಣಿಕರು ಯಳಂದೂರು ಅಥವಾ ಸಂತೇಮರಹಳ್ಳಿಗೆ ತೆರಳಿ ಬಸ್ ಹತ್ತುವ ಪರಿಸ್ಥಿತಿ ಇದೆ. ಈ ಸಲುವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಮೆಲ್ಲಹಳ್ಳಿ ಗೇಟ್, ಅಂಬಳೆಪಾಲ್ ಹಾಗೂ ಕಂದಹಳ್ಳಿ ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ಕೋರಿದರು. ರೈತ ಸಂಘದ ಅಂಬಳೆ ಶಿವಕುಮಾರಸ್ವಾಮಿ, ಸಿದ್ದಲಿಂಗಸ್ವಾಮಿ, ಶಿವಪ್ರಸಾದ್, ಕಂದಹಳ್ಳಿ ನಾರಾಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net