ರೈತರಿಗೆ ನ್ಯಾಯ ಒದಗಿಸಲು ಜಿಲ್ಲಾಡಳಿತ ಕ್ರಮ

10chn4
Published on

ಚಾಮರಾಜನಗರ: ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಚಿನ್ನ ಅಡವಿಟ್ಟು ವಂಚನೆಗೊಳಗಾಗಿರುವ ರೈತರಿಗೆ ಚಿನ್ನ ವಾಪಸು ಬಿಡಿಸಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಲೆಯೂರು ಪಿಎಸಿಸಿಯಲ್ಲಿ ಚಿನ್ನ ಅಡವಿಟ್ಟು ವಂಚನೆಗೊಳಗಾದ ರೈತರ ಸಭೆಯಲ್ಲಿ ಮಾತನಾಡಿದರು. ರೈತರಿಗೆ ಹೊರೆಯಾಗದ ರೀತಿಯಲ್ಲಿ ಫೈನಾನ್ಸ್ ಕಂಪನಿಗಳಲ್ಲಿರುವ ಚಿನ್ನವನ್ನು ಬಿಡಿಸಿಕೊಡಲು ಕ್ರಮ ವಹಿಸಲಾಗಿದೆ. 384 ರೈತರ ಪೈಕಿ ಈಗಾಗಲೇ 96 ಜನರನ್ನು ಗುರುತಿಸಲಾಗಿದ್ದು, ಮುಂದಿನ ವಾರ ಚಿನ್ನವನ್ನು ಪ್ರದರ್ಶಿಸಲಾಗುವುದು. ಅಲ್ಲಿಗೆ ಬಂದು ತಮ್ಮ ಚಿನ್ನವನ್ನು ಗುರುತಿಸಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಹಕಾರ ಇಲಾಖೆ ರೈತರಿಗೆ ನ್ಯಾಯ ಕೊಡಿಸಲು ಕ್ರಮ ವಹಿಸಿವೆ ಎಂದರು.
ಈ ರೀತಿಯ ವಂಚನೆ ಪ್ರಕರಣಗಳು ರಾಜ್ಯದಲ್ಲಿ ತುಂಬ ಆಗಿವೆ. ಯಾವುದೇ ಪ್ರಕರಣಗಳು ಅಂತ್ಯ ಕಂಡಿಲ್ಲ. ಪರಿಹಾರ ಕೂಡ ಸಿಕ್ಕಿಲ್ಲ. ಆದರೆ ಜಿಲ್ಲಾಡಳಿತ ನಮ್ಮ ರೈತರಿಗೆ ನ್ಯಾಯ ಕೊಡಿಸಲು ಕ್ರಮ ವಹಿಸಿದೆ. ಈಗಾಗಲೇ ಪಿಎಸಿಸಿ ಬ್ಯಾಂಕ್‌ನ ಸಿಇಒ ನಾಗೇಂದ್ರ ಅವರು ಚಿನ್ನವನ್ನು ಅಡವಿಟ್ಟಿದ್ದ ಫೈನಾನ್ಸ್ ಕಂಪನಿಗಳು ಕೋರ್ಟ್‌ಗೆ ಹೋಗದಂತೆ ತಡೆ ಹಿಡಿದಿದ್ದೇವೆ. ಮುಂದಿನ ಒಂದೂವರೆ ತಿಂಗಳ ಒಳಗೆ ಸಮಸ್ಯೆ ಬಗೆಹರಿಯಲಿದೆ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು.

ಸೈಬರ್ ಠಾಣೆ ಇನ್ಸ್‌ಪೆಕ್ಟರ್ ಸಾಗರ್ ಮಾತನಾಡಿ, ಈಗಾಗಲೇ ಫೈನಾನ್ಸ್‌ಗಳಿಂದ 8.114 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ ಕೆಲವು ಫೈನಾನ್ಸ್ ಕಂಪನಿಗಳು ತಮ್ಮ ಬಳಿಯೇ ಚಿನ್ನವನ್ನು ಇಟ್ಟುಕೊಂಡಿವೆ. ಪ್ರಕರಣ ದಾಖಲಾಗುವ ಮೊದಲೇ 280 ಗ್ರಾಂ ಚಿನ್ನ ಹರಾಜಾಗಿರುವ ಕುರಿತು ಕ್ರಮವಹಿಸಿ, ಆ ಚಿನ್ನವನ್ನು ರೈತರಿಗೆ ಕೊಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮಲೆಯೂರು ಪಿಎಸಿಸಿ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟವರು ಯಾವುದೇ ಕಾರಣಕ್ಕೂ ಬೇರೆಯವರ ಮಾತು ಕೇಳಬೇಡಿ. ಚಿನ್ನ ಅಡವಿಟ್ಟಿರುವ ಬಗ್ಗೆ ರಸೀದಿ ಇರಬೇಕು. ಈಗಾಗಲೇ ಈ ಪ್ರಕರಣ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಸೂಚನೆಯಂತೆ ಹೆಚ್ಚುವರಿ ಬಡ್ಡಿ ಕಟ್ಟಿ ತಮ್ಮ ಚಿನ್ನವನ್ನು ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಹಕಾರ ಇಲಾಖೆಯ ದಯಾನಂದ್ ಸೇರಿದಂತೆ ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net