

ಗುಂಡ್ಲುಪೇಟೆ: ಬಂಡೀಪುರದ ಕಾಡಂಚಿನ ಜನರಿಗೆ 24 ಗಂಟೆ ಆಂಬುಲೆನ್ಸ್ ಸೇವೆ ಒದಗಿಲು ಅರಣ್ಯ ಇಲಾಖೆ ಮುಂದಾಗಿದೆ.
ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ಬಂಡೀಪುರ, ಎಲಚೆಟ್ಟಿ, ಜಕ್ಕಹಳ್ಳಿ, ಮಂಗಲ ಸೇರಿದಂತೆ ಇನ್ನಿತರ ಗ್ರಾಮಗಳು ಹಾಗೂ ಗಿರಿಜನ ಹಾಡಿಗಳಿಗೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಅಲ್ಲಿನ ಜ್ವರ, ನೆಗಡಿ ಸೇರಿದಂತೆ ಇನ್ನಿತರ ಕಾಯಿಲೆಗಳು ಕಾಣಿಸಿಕೊಂಡರೆ ಪಟ್ಟಣದ ಆಸ್ಪತ್ರೆಗಳಿಗೆ ತೆರಳಲು ಹರಸಾಹಸ ಪಡಬೇಕಾಗಿದೆ.
ಸಕಾಲದಲ್ಲಿ ಚಿಕಿತ್ಸೆ ದೊರಕದೆ ಸಾವು-ನೋವುಗಳು ಸಂಭವಿಸಿರುವ ಉದಾಹರಣೆಗಳು ಇವೆ. ಅಲ್ಲದೆ ರಾತ್ರಿ 9 ಗಂಟೆ ನಂತರ ಚೆಕ್‌ಪೋಸ್ಟ್ ಬಂದ್ ಮಾಡಿದ ನಂತರ ಸಂಚಾರ ವ್ಯವಸ್ಥೆ ಸಂಪೂರ್ಣ ಬಂದ್ ಆಗುತ್ತಿದೆ. ಅನಾರೋಗ್ಯ ಸಮಯದಲ್ಲಿ ಸ್ಥಳೀಯ ಜನರ ಓಡಾಟಕ್ಕೆ ಅವಕಾಶ ಇದ್ದರೂ ವನ್ಯಜೀವಿಗಳ ಭೀತಿಯೂ ಇರುವುದರಿಂದ ದ್ವಿಚಕ್ರ ವಾಹನ ಸಂಚಾರ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಂಬುಲೆನ್ಸ್ ನೆರವು ಒದಗಿಸಲು ಮುಂದಾಗಿದ್ದು, ಜನಸ್ನೇಹಿ ಇಲಾಖೆಯಾಗುವತ್ತ ಅರಣ್ಯಾಧಿಕಾರಿ ಹೆಜ್ಜೆ ಇಟ್ಟಿದ್ದಾರೆ.
ರಾತ್ರಿ ವೇಳೆ ವಾಹನ ಸಂಪರ್ಕವಿಲ್ಲದೆ, ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇರುವುದನ್ನು ಮನಗಂಡ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ್ ವಿಶೇಷ ಕಾಳಜಿ ವಹಿಸಿ, ಹುಲಿ ಸಂರಕ್ಷಣಾ ಪ್ರತಿಷ್ಠಾನದ ವತಿಯಿಂದ ಎರಡು ಮಾರುತಿ ಓಮ್ನಿ ಕಾರುಗಳನ್ನು ಬಾಡಿಗೆಗೆ ಪಡೆದು ಕಾಡಂಚಿನ ಜನರಿಗೆ ಆರೋಗ್ಯ ಸೇವೆ ನೀಡಲು ಯೋಜನೆ ರೂಪಿಸಿದ್ದಾರೆ.
ಹುಲಿ ಸಂರಕ್ಷಣಾ ಪ್ರತಿಷ್ಠಾನ ಕೊಡುಗೆಯಾಗಿ ನೀಡಿರುವ ಆಂಬುಲೆನ್ಸ್ ದಿನದ 24 ಗಂಟೆಗಳ ಕಾಲ ಸೇವೆಗೆ ಸಿದ್ಧವಿದ್ದು, ಆರೋಗ್ಯ ಸಮಸ್ಯೆ ಕಂಡು ಬಂದ ಕಾಡಂಚಿನ ಗ್ರಾಮಸ್ಥರು ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೆ ಕೂಡಲೇ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿ, ಪ್ರಾಥಮಿಕ ಅಥವಾ ತಾಲೂಕು ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುಲಾಗುತ್ತದೆ. ಹೆಚ್ಚಿನ ತುರ್ತು ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೂ ಆಂಬುಲೆನ್ಸ್ ಕೂಡ ತೆರಳಲಿದೆ.
ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿ:
ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬಂಡೀಪುರದಿಂದ ಪಟ್ಟಣದ ಆಸ್ಪತ್ರೆಗಳಿಗೆ ತೆರಳಲು ವಾಹನಗಳ ವ್ಯವಸ್ಥೆ ಇಲ್ಲದೆ ಜನರು ಹಲವು ವರ್ಷಗಳಿಂದಲೂ ಪರದಾಡುತ್ತಿದ್ದರು. ಈ ಮಧ್ಯೆ ದ್ವಿಚಕ್ರವಾಹನಗಳಲ್ಲಿ ಕಾಡುಪ್ರಾಣಿಗಳ ಭಯದಲ್ಲಿ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ಇತ್ತು. ಈ ಕುರಿತು ಸ್ಥಳೀಯರು ಅರಣ್ಯಾಧಿಕಾರಿಗಳ ಮುಂದೆ ಸಮಸ್ಯೆ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ಎರಡು ಆಂಬುಲೆನ್ಸ್ ಕಲ್ಪಿಸಲಾಗಿದೆ.
ಹುಲಿ ಸಂರಕ್ಷಣಾ ಪ್ರತಿಷ್ಠಾನ ಕೊಡುಗೆಯಾಗಿ ನೀಡಿರುವ ಎರಡು ಆಂಬುಲೆನ್ಸ್ ಸೇವೆಗೆ ಸಿದ್ಧವಾಗಿದ್ದು, ಸದ್ಯದಲ್ಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್ ಚಾಲನೆ ನೀಡಲಿದ್ದಾರೆ.ಡಾ.ರಮೇಶ್ ಕುಮಾರ್ನಿರ್ದೇಶಕ, ಹುಲಿ ಯೋಜನೆ