ಹೂಡಿಕೆ ಹಣ ವಾಪಸ್ ಕೊಡಿಸಲು ಮನವಿ ಸಲ್ಲಿಕೆ

08chn3
Published on

ಚಾಮರಾಜನಗರ : ಗ್ರೀನ್‌ಬಡ್ಸ್ ಕಂಪನಿಯಲ್ಲಿ ಸಾರ್ವಜನಿಕರು ಹೂಡಿಕೆ ಮಾಡಿರುವ ಹಣ ಕೊಡಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರೀನ್‌ಬಡ್ಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಶಿರಸ್ತೇದಾರ್ ರಂಗರಾಜು ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮೈಸೂರು ಮೂಲದ ಗ್ರೀನ್‌ಬಡ್ಸ್ ಕಂಪನಿಗೆ ಚಾಮರಾಜನಗರ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಸಾರ್ವಜನಿಕರು ಹಣ ಹೂಡಿಕೆ ಮಾಡಿದ್ದಾರೆ. ಕಂಪನಿಯು ಹಣ ಪಾವತಿ ಮಾಡದೆ ಬಾಗಿಲು ಮುಚ್ಚಿದ ಹಿನ್ನೆಲೆಯಲ್ಲಿ ಹಣ ಕಟ್ಟಿಸಿರುವ ಕಾರ್ಯಕರ್ತರು ಠೇವಣಿದಾರರಿಗೆ ಹಣ ಕೊಡಿಸಲು ಆಗದೇ ಕೆಲವರು ಊರನ್ನೇ ತೊರೆದಿದ್ದಾರೆ. 2013ರಿಂದ ಇಲ್ಲಿಯವರೆಗೆ ರೈತ ಸಂಘಟನೆಗಳ ಮುಖಂಡರು ನಮಗೆ ನ್ಯಾಯ ಒದಗಿಸಲು ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವಾಗಿ ಸರ್ಕಾರ ಕಂಪನಿಯ ಆಸ್ತಿ ವಶಪಡಿಸಿಕೊಂಡಿದೆ ಎಂದರು.

ಗ್ರೀನ್‌ಬಡ್ಸ್ ಆಸ್ತಿಯನ್ನು ಇ-ಹರಾಜು ನಡೆಸಲು ಸರ್ಕಾರ ವಿಶೇಷ ಪ್ರಾಧಿಕಾರ ರಚನೆ ಮಾಡಿ, ಪ್ರಾಧಿಕಾರದ ವಿಶೇಷಾಧಿಕಾರಿಗಳು ಆಸ್ತಿ ಹರಾಜು ಪ್ರಕ್ರಿಯೆಗೆ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಸಹಕಾರ ನೀಡದ ಪರಿಣಾಮ ಆಸ್ತಿ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಕಂಪನಿಯ ಆಸ್ತಿಗಳು ಮುಖ್ಯ ರಸ್ತೆಯಲ್ಲೇ ಇರುವುದರಿಂದ ಅವುಗಳ ಮಾರುಕಟ್ಟೆ ದರವು ಹೆಚ್ಚಿರುತ್ತದೆ. ಸಂಬಂಧಪಟ್ಟ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳು ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ಆರಂಭಿಸಬೇಕು. ಆಸ್ತಿಗಳು ಹೆಚ್ಚಿನ ದರಕ್ಕೆ ಖರೀದಿಯಾಗುವಂತೆ ಕ್ರಮ ವಹಿಸಬೇಕು. ಇದರಿಂದ ಕಂಪನಿಯಲ್ಲಿ ಹಣ ಹೂಡಿರುವ ಠೇವಣಿದಾರರಿಗೆ ಕಟ್ಟಿದ ಹಣವನ್ನಾದರೂ ಕೊಡಿಸಬಹುದಾಗಿದೆ. ಜಿಲ್ಲಾಡಳಿತ ಶೀಘ್ರದಲ್ಲೇ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕಾರ್ಯಕರ್ತರಾದ ಶ್ರೀಕಂಠಪ್ರಸಾದ್, ಎಸ್.ಮಹದೇವನಾಯ್ಕ, ಎಂ.ಕೃಷ್ಣರಾಜು, ನಾಗವೇಣಿ, ಶಶಿಕಲಾ, ಶಾಂತಮ್ಮ, ಬಂಗಾರಮ್ಮ, ಕೆ.ಕೆ.ಮಂಜುಳಾ, ಸುಮತಿ, ಸಾಕಮ್ಮ, ಪ್ರೇಮ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net