

ಚಾಮರಾಜನಗರ: ಜಿಲ್ಲೆಯಲ್ಲಿರುವ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲು ಅನುಸರಿಸಿರುವ ಲಾಟರಿ ಪ್ರಕ್ರಿಯೆ ಅದೃಷ್ಟದ ಬದಲು ದುರದೃಷ್ಟವಾಗಿ ಪರಿಣಮಿಸಿರುವ ಪ್ರಶ್ನೆ ಮೂಡಿದೆ.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2022-23ನೇ ಸಾಲಿನಲ್ಲಿ 16 ತ್ರಿಚಕ್ರ ವಾಹನಗಳನ್ನು ಅಂಗವಿಕಲರಿಗೆ ನೀಡಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ನಾಲ್ಕು ಲಾನುಭವಿಗಳಿಗೆ ತ್ರಿಚಕ್ರ ವಾಹನ ನೀಡಲಾಗಿದೆ. ಅಂಗವಿಕಲರ ನ್ಯೂನತೆ ಆಧರಿಸಿ ಲಾನುಭವಿಗಳನ್ನು ಆಯ್ಕೆ ಮಾಡಬೇಕಿತ್ತು. ಈ ರೀತಿ ಮಾಡಿದ್ದರೆ ಅರ್ಹರಿಗೆ ತ್ರಿಚಕ್ರ ವಾಹನ ಸಿಗುತ್ತಿತ್ತು. ಆದರೆ ಚೀಟಿಯಲ್ಲಿ ಹೆಸರು ಬರೆದು ಆಯ್ಕೆ ಮಾಡಿರುವುದರಿಂದ ಅರ್ಹರು ಅವಕಾಶ ಸಿಗದೆ ಅದೃಷ್ಟ ಇದ್ದವರಿಗಷ್ಟೇ ಸೌಲಭ್ಯ ದೊರೆತಿದೆ. ಈ ಆಯ್ಕೆ ಪ್ರಕ್ರಿಯೆ ವಿರುದ್ಧ ಕೆಲವರು ಅಸಮಾಧಾನ ಹೊರಹಾಕಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ನಡೆಸಬಾರದು ಎಂಬ ಒತ್ತಾಯ ಕೇಳಿಬಂದಿದೆ.
ಲಾನುಭವಿಗಳ ಆಯ್ಕೆಗಾಗಿಯೇ ಸಮಿತಿ ಇದೆ. ಇದರಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ, ಎನ್‌ಜಿಒ, ಆರ್‌ಟಿಒ ಅಧಿಕಾರಿಗಳು ಇರುತ್ತಾರೆ. ಜಿಲ್ಲಾ ಪಂಚಾಯಿತಿ ಸಿಇಒ ಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ನಿರ್ಧರಿಸುತ್ತಾರೆ. ಕೆಲವರು ಅರ್ಜಿದಾರರ ಸಂದರ್ಶನ, ಮನೆ ಭೇಟಿ ಮಾಡಿಸಿದರೆ ಮತ್ತೆ ಕೆಲವರು ಸರ್ವೇ ಮಾಡಿಸುತ್ತಾರೆ. ಈ ಹಿಂದೆ ಇದ್ದ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ ಲಾಟರಿ ಪ್ರಕ್ರಿಯೆ ನಡೆಸಲು ತಿಳಿಸಿದ್ದರು ಎಂದು ಗೊತ್ತಾಗಿದೆ.
ತ್ರಿಚಕ್ರ ವಾಹನ ಹೆಚ್ಚಳ ಮಾಡಿ:
ಅಂಗವಿಕಲರಿಗೆ ನೀಡುವ ತ್ರಿಚಕ್ರ ವಾಹನಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದೆ. ಹಲವು ವರ್ಷಗಳಿಂದ ಅಧಿಕ ಸಂಖ್ಯೆಯಲ್ಲಿ ತ್ರಿಚಕ್ರ ವಾಹನಗಳನ್ನು ನೀಡಿಲ್ಲ. 2021ರಲ್ಲಿ 24 ತ್ರಿಚಕ್ರ ವಾಹನಗಳನ್ನು ನೀಡಲಾಗಿತ್ತು. ನಂತರದ ವರ್ಷದಲ್ಲಿ ಇದರ ಸಂಖ್ಯೆ 16ಕ್ಕೆ ಇಳಿಯಿತು. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ತ್ರಿಚಕ್ರ ವಾಹನಗಳು ಅಧಿಕ ಸಂಖ್ಯೆಯಲ್ಲಿ ದೊರೆಯುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. 2023-24ನೇ ಸಾಲಿನಲ್ಲಿ 4 ಸಾವಿರ ಅಂಗವಿಕಲರಿಗೆ ಯಂತ್ರಚಾಲಿಕ ದ್ವಿಚಕ್ರ ವಾಹನ ವಿತರಿಸಲು ಉದ್ದೇಶಿಸಲಾಗಿದೆ ಎಂದಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರಿನ ಕಂಠೀರವ ಒಳ ಕ್ರೀಡಾಂಗಣದಲ್ಲಿ ಡಿಸೆಂಬರ್‌ನಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 16 ವಾಹನಗಳ ಗುರಿಯನ್ನು ನೀಡಲಾಗಿತ್ತು. ಆದರೆ ಅರ್ಜಿಗಳು ಸಲ್ಲಿಕೆಯಾಗಿದ್ದು 108. ಹೀಗಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಭರವಸೆ ಕಾರ್ಯಗತಗೊಂಡರೆ ಅರ್ಹರೆಲ್ಲರಿಗೂ ತ್ರಿಚಕ್ರ ವಾಹನ ದೊರೆಯಲಿದೆ.
ನಿಗದಿತ ತಿಂಗಳಿಗೆ ನಡೆಯಲಿ ಸಭೆ:
ಜಿಲ್ಲೆಯಲ್ಲಿ ಅಂಗವಿಕಲರ ಕುಂದುಕೊರತೆ ಸಭೆ ನಿಗದಿತ ತಿಂಗಳಲ್ಲಿ ನಡೆಯುತ್ತಿಲ್ಲ. ಮೂರು ತಿಂಗಳಿಗೊಮ್ಮೆ ಸಭೆ ನಡೆಯಬೇಕೆಂಬ ನಿಯಮವಿದೆ. ಆದರೆ ಹಿಂದಿನ ವರ್ಷಗಳ ಸಭೆಗಳ ದಿನಾಂಕ ನಿಗದಿಯನ್ನು ಗಮನಿಸಿದರೆ ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಯುತ್ತಿಲ್ಲ. 2024ರಲ್ಲಾದರೂ ಸಭೆ ನಡೆಯಬೇಕಿದೆ. ಸಭೆ ನಡೆಯದ ಕಾರಣ ಜಿಲ್ಲೆಯಲ್ಲಿರುವ ಅಂಗವಿಕಲರ ಸಮಸ್ಯೆಗಳು ಜಿಲ್ಲಾಡಳಿತದ ಗಮನಕ್ಕೆ ಬಾರದಂತಾಗಿದೆ. ಜಿಲ್ಲೆಯಲ್ಲಿ 18,501 ಅಂಗವಿಕಲರಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 6,130, ಗುಂಡ್ಲುಪೇಟೆ ತಾಲೂಕಿನಲ್ಲಿ 4,006, ಕೊಳ್ಳೇಗಾಲ ತಾಲೂಕಿನಲ್ಲಿ 3,150, ಹನೂರು ತಾಲೂಕಿನಲ್ಲಿ 3,277, ಯಳಂದೂರು ತಾಲೂಕಿನಲ್ಲಿ 1,938 ಅಂಗವಿಕಲರಿದ್ದಾರೆ. ಇವರಿಗೆ ಹಲವು ಇಲಾಖೆಗಳಲ್ಲಿ ಸೌಲಭ್ಯ ಪಡೆದುಕೊಳ್ಳಲು ಸರಿಯಾದ ಅರಿವಿಲ್ಲ. ಕೆಲವು ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರನ್ನು ಅಲೆಸುತ್ತಿದ್ದಾರೆಂಬ ಆರೋಪವಿದೆ. ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕುಂದುಕೊರತೆ ಸಭೆ ವೇದಿಕೆಯಾಗಬೇಕಿದೆ.
ಶೌಚಗೃಹ ನಿರ್ವಹಣೆಯಾಗದ್ದಕ್ಕೆ ಆಕ್ರೋಶ
ಜಿಲ್ಲಾಡಳಿತ ಭವನದ ಒಳಗೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಎದುರು ಇರುವ ಅಂಗವಿಕಲರ ಶೌಚಗೃಹದ ನಿರ್ವಹಣೆ ಸರಿ ಇಲ್ಲ ಎಂದು ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ದೂರಿದ್ದಾರೆ. ಹೆಸರಿಗಷ್ಟೇ ಶೌಚಗೃಹವಿದೆ. ಆದರೆ ಉಪಯೋಗಕ್ಕೆ ಬರುತ್ತಿಲ್ಲ. ಜಿಲ್ಲಾಡಳಿತ ಭವನಕ್ಕೆ ಬರುವ ಅಂಗವಿಕಲರಿಗೆ ಈ ಶೌಚಗೃಹವೊಂದೇ ಬಳಕೆಗೆ ಸಿಗುವುದು. ಇದರಲ್ಲಿ ಒಮ್ಮೊಮ್ಮೆ ನೀರು ಬರುವುದಿಲ್ಲ ಎಂದು ಹೇಳಿದ್ದಾರೆ.
20976 ಅಂಗವಿಕಲರಿಗೆ ಮಾಸಾಶನ
ಜಿಲ್ಲೆಯಲ್ಲಿ ಒಟ್ಟು 20976 ಅಂಗವಿಕಲರಿಗೆ ಮಾಸಾಶನ ಬರುತ್ತಿದೆ. ಶೇ.75ಕ್ಕಿಂತಲೂ ಕಡಿಮೆ ಅಂಗವೈಕಲ್ಯ ಇರುವ 8473 ಜನರಿಗೆ 800 ರೂ., ಶೇ.75ರಷ್ಟು ಅಂಗವೈಕಲ್ಯ ಇರುವ 11,487 ಜನರಿಗೆ 1,400 ರೂ., 1,016 ಬುದ್ಧಿಮಾಂದ್ಯರಿಗೆ 2000 ರೂ. ಮಾಸಾಶನ ನೀಡಲಾಗುತ್ತಿದೆ.
ಸಿಬ್ಬಂದಿ ಕೊರತೆ:
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಸಿಬ್ದಂದಿ ಕೊರತೆ ಕಾಡುತ್ತಿದೆ. ಒಬ್ಬರು ಎ್ಡಿಎ, ಒಬ್ಬರು ಟೈಪಿಸ್ಟ್ ಇದ್ದಾರೆ. ತಾಲೂಕುಗಳಲ್ಲಿ ಅಂಗವಿಕಲರ ಇಲಾಖೆಯ ಕಚೇರಿಗಳಿಲ್ಲ. ಇಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‌ಡಬ್ಲುೃ) ಕೆಲಸ ಮಾಡುತ್ತಿದ್ದಾರೆ. ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರಿನಲ್ಲಿ ತಲಾ ಒಬ್ಬರು ಮತ್ತು ಕೊಳ್ಳೇಗಾಲ ಹಾಗೂ ಹನೂರಿನಲ್ಲಿ ಒಬ್ಬರು ಎಂಆರ್‌ಡಬ್ಲುೃ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 129 ಜನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಈ ಇಲಾಖೆಯನ್ನು ಮುನ್ನಡೆಸಬೇಕಾದ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಹುದ್ದೆಗೂ ಸುರೇಶ್ ಅವರನ್ನು ಪ್ರಭಾರ ನೀಡಲಾಗಿದೆ.
ಕಳೆದ ಸಾಲಿನಲ್ಲಿ ತ್ರಿಚಕ್ರ ವಾಹನ ನೀಡಲು ಆಹ್ವಾನಿಸಿದ್ದ ಅರ್ಜಿಗಳಲ್ಲಿ ಅರ್ಹರನ್ನು ಆಯ್ಕೆ ಮಾಡಿ ಲಾಟರಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಹೀಗಾಗಿ ಅರ್ಹರನ್ನು ಮಾತ್ರ ಪರಿಗಣಿಸಲಾಗಿದೆ.ಸುರೇಶ್, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕ ಕಲ್ಯಾಣಾಧಿಕಾರಿ (ಪ್ರಭಾರ), ಚಾಮರಾಜನಗರ ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಹಾಕಿದ್ದ ಅರ್ಹ, ತೀವ್ರ ತರವಾದ ಅಂಗವಿಕಲರಿಗೆ ಲಾಟರಿ ಆಯ್ಕೆ ಮೂಲಕ ಅವಕಾಶ ಸಿಕ್ಕಿಲ್ಲ. ಈ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಾಲಿನಲ್ಲಿ ಸಲಹಾ ಸಮಿತಿಯ ನಿರ್ಣಯದಂತೆಯೇ ಆಯ್ಕೆಯಾಗಬೇಕು. ಲಾಟರಿ ಮೂಲಕ ಆಯ್ಕೆ ಮಾಡುವುದು ಬೇಡ. ಅಧಿಕಾರಿಗಳು ಅರ್ಜಿದಾರರ ಮನೆಗೆ ಭೇಟಿ ನೀಡಲಿ, ಅರ್ಹರನ್ನು ಗುರುತಿಸಲಿ. ಯಾರ ಒತ್ತಾಯಕ್ಕೂ ಮಣಿಯದೆ ಯೋಗ್ಯರಿಗೆ ತ್ರಿಚಕ್ರ ವಾಹನ ನೀಡಲಿ.ಎನ್.ಕೃಷ್ಣಮೂರ್ತಿ, ಗೌರವಾಧ್ಯಕ್ಷ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ, ಚಾಮರಾಜನಗರ