

ಚಾಮರಾಜನಗರ: ನಗರಸಭೆ ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡುವಂತೆ ಒತ್ತಾಯಿಸಿ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾಸಂಘ ನಗರಸಭೆ ಕಚೇರಿ ಮುಂಭಾಗ ನಡೆಸುತ್ತಿರುವ ಧರಣಿ ಶುಕ್ರವಾರ ಎರಡನೇ ದಿನ ಪೂರೈಸಿತು.
ಸಂಘದ ಜಿಲ್ಲಾಧ್ಯಕ್ಷ ಶಂಕರ್ ಸಿ.ಅಂಕನಶೆಟ್ಟಿಪುರ ಮಾತನಾಡಿ, ನಗರಸಭೆಯ ಹೊರಗುತ್ತಿಗೆ ನೌಕರರಿಗೆ ಸುಮಾರು 4 ತಿಂಗಳಿಂದ ಸಂಬಳ ನೀಡಿಲ್ಲ. ಗುರುವಾರ ಶಾಸಕರು ಭೇಟಿ ನೀಡಿ 2 ತಿಂಗಳ ಸಂಬಳ ನೀಡುವಂತೆ ಸೂಚನೆ ನೀಡಿದ್ದರೂ ಕೇವಲ 1 ತಿಂಗಳ ಸಂಬಳ ನೀಡಲಾಗಿದೆ. ಈ ನಿಟ್ಟಿನಲ್ಲಿ 2 ತಿಂಗಳ ಸಂಬಳ ನೀಡುವಂತೆ ಪ್ರತಿಭಟನೆಯನ್ನು ಮುಂದುವರಿಸಲಾಗಿದೆ ಎಂದರು.
ನಗರಸಭೆಯಲ್ಲಿ ಕಸದ ವಿಲೇವಾರಿ ವಾಹನ ಚಾಲಕರು, ಒಳಚರಂಡಿ, ಲೋಡರ್ಸ್, ಕ್ಲೀನರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ಶಾಸಕರ ಮಾತಿಗೂ ಬೆಲೆ ಇಲ್ಲದೆ ಗುತ್ತಿಗೆದಾರರು ಕೇವಲ 1 ತಿಂಗಳ ಸಂಬಳ ಹಾಕಿದ್ದಾರೆ. ಕೂಡಲೇ ಪೌರಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದರೆ ಕಾಯಂ ನೌಕರರನ್ನು ಒಳಗೊಂಡಂತೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಪೌರಾಯುಕ್ತ ರಾಮದಾಸ್ ಭೇಟಿ ನೀಡಿ ಹೊರಗುತ್ತಿಗೆ ನೌಕರರ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನೌಕರರ ಖಾತೆಗೆ ಸಂಬಳ ಜಮಾ ಆಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೊರಗುತ್ತಿಗೆ ನೌಕರರು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ಗಾಳೀಪುರ ಎಂ.ಮಹೇಶ್, ಖಲೀಲ್ ಉಲ್ಲಾ, ಮಾಜಿ ಸದಸ್ಯ ಮಹದೇವಯ್ಯ, ಹೊರಗುತ್ತಿಗೆ ನೌಕರರಾದ ಬಿ.ಕುಮಾರ್, ಅಜಿತ್, ಸುಜಿತ್, ಪಾರ್ವತಿ, ಜಾನಕಿ, ಕೆ.ಪ್ರಭು, ಕಾರ್ತೀಕ್, ರಾಮಕೃಷ್ಣ, ಎಂ.ರಾಜೇಂದ್ರ, ಕುಮಾರ್, ಮಹೇಶ್, ಶಿವರಾಜ್, ಅರ್ಫಜ್ ಇತರರು ಭಾಗವಹಿಸಿದ್ದರು.