

ಚಾಮರಾಜನಗರ : ನೀಟ್, ಸಿಇಟಿ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜಾಗೃತಿವಹಿಸಬೇಕು ಎಂದು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಮಂಜುನಾಥ್ ಪ್ರಸನ್ನ ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ಹಾಗೂ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಿಇಟಿ-2024 ವಿದ್ಯಾರ್ಥಿ ಮಿತ್ರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2024ರಿಂದ ಅನ್ವಯವಾಗುವಂತೆ ವರ್ಷದ ಆರಂಭದಲ್ಲೇ ವಿದ್ಯಾರ್ಥಿಮಿತ್ರ ತರಬೇತಿ ಎಂಬ ಕಾರ್ಯಕ್ರಮವನ್ನು ರೂಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರಸ್ತುತ ನೀಟ್, ಸಿಇಟಿ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಹಲವು ವಿಧಾನಗಳನ್ನು ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಭರ್ತಿ ಮಾಡುವಾಗ ಸಾಕಷ್ಟು ತಪ್ಪುಗಳು ಕಂಡುಬರುತ್ತಿತ್ತು. ಇದನ್ನು ಮನಗಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ವರ್ಷದಿಂದ ವಿದ್ಯಾರ್ಥಿ ಮಿತ್ರ ತರಬೇತಿ ಎಂಬ ಹೆಸರಿನಡಿ ಉಪನ್ಯಾಸಕರಿಗೆ ಉತ್ತಮ ಕಾರ್ಯಕ್ರಮವನ್ನು ರೂಪಿಸಿರುವುದು ಬಹುದೊಡ್ಡ ಪರಿಕಲ್ಪನೆ ಎಂದರು.
ನಮ್ಮ ಜಿಲ್ಲೆಯಿಂದ 8 ಉಪನ್ಯಾಸಕರು ಬೆಂಗಳೂರಿಗೆ ಹೋಗಿ ತರಬೇತಿ ಪಡೆದು ಬಂದಿದ್ದಾರೆ. ಇವರು ಜಿಲ್ಲೆಯ ಎಲ್ಲ ಉಪನ್ಯಾಸಕರಿಗೂ ತರಬೇತಿ ನೀಡಲಿದ್ದು, ಸರಿಯಾದ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ಅರ್ಜಿ ಭರ್ತಿ ಸಮಯದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸುವ ಮೂಲಕ ಅವರಿಗೆ ನೆರವಾಗಬೇಕು ಎಂದು ಕಿವಿಮಾತು ಹೇಳಿದರು.
ಭೌತಶಾಸ್ತ್ರ ವಿಭಾಗದಿಂದ ಪ್ಲೇ ವಿತ್ ಫಿಜಿಕ್ಸ್ ಎಂಬ ಶೀರ್ಷಿಕೆಯಡಿ ಕೈಪಿಡಿಯೊಂದನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಮೋದ್, ಖಜಾಂಚಿ ಸ್ವಾಮಿ, ಜೆಎಸ್‌ಎಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ದೇವರಾಜ ಮೂರ್ತಿ, ಉಪನ್ಯಾಸಕರಾದ ಟಿ.ಮಧು, ಷಡಕ್ಷರಸ್ವಾಮಿ, ಶ್ರೀನಾಥ್, ಅಜಯ್‌ಕುಮಾರ್, ರೇಖಾ.ಆರ್, ಎಸ್.ಜಯಶ್ರೀ, ಸೌಗಂಧಿನಿ, ಸವಿತಾ ಹಾಜರಿದ್ದರು.