

ಚಾಮರಾಜನಗರ : ಹೆಲ್ಮೆಟ್ ಧರಿಸದವರಿಗೆ ನಗರದ ಸಂಚಾರ ಪೊಲೀಸರು ದಂಡ ವಿಧಿಸಲು ತೋರುವ ಆಸಕ್ತಿಯನ್ನು ಪಾರ್ಕಿಂಗ್ ಸಮಸ್ಯೆ ಪರಿಹರಿಸುವುದರಲ್ಲಿ ತೋರುತ್ತಿಲ್ಲ.
ನಗರದ ಶ್ರೀಭುವನೇಶ್ವರಿ ವೃತ್ತ, ಕೆನರಾ ಬ್ಯಾಂಕ್ ಮುಂಭಾಗ ಹಾಗೂ ಇತರ ಕಡೆಗಳಲ್ಲಿ ಹೆಲ್ಮೆಟ್ ಧರಿಸದವರಿಗೆ ನಿತ್ಯವೂ ದಂಡ ವಿಧಿಸಲು ಮುಂದಾಗುವ ಸಂಚಾರ ಪೊಲೀಸರು, ಸಮೀಪದಲ್ಲೇ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ಮಾಡುವಂತೆ ತಿಳಿವಳಿಕೆ ಹೇಳಲು ಮುಂದಾಗುತ್ತಿಲ್ಲ. ಇದರಿಂದಾಗಿ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ.
ಶ್ರೀ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ತ್ಯಾಗರಾಜ ರಸ್ತೆ, ರಥದ ಬೀದಿ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂಪಿಗೆ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್ ಸೌಲಭ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆದರೆ ಬಿ.ರಾಚಯ್ಯ ಜೋಡಿ ರಸ್ತೆ, ಡಿವಿಯೇಷನ್, ನ್ಯಾಯಾಲಯ ರಸ್ತೆಯಲ್ಲಿ ವಾಹನಗಳನ್ನು ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ಮಾಡದಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಚಾಲಕರಿಗೆ ನಿತ್ಯವೂ ಕಿರಿಕಿರಿ ಉಂಟಾಗುತ್ತಿದೆ.
ರಸ್ತೆಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಅಲ್ಲಲ್ಲಿ ಸಣ್ಣ-ಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ. ವಾಹನಗಳ ಓಡಾಟ ಹೆಚ್ಚಾದಾಗ ಟ್ರಾಫಿಕ್ ಸಮಸ್ಯೆಯೂ ತಲೆದೋರುತ್ತಿದೆ. ಸಂಚಾರ ಪೊಲೀಸರು ವಿವಿಧ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸಿದವರನ್ನು ಹಿಡಿದು ದಂಡ ಹಾಕುತ್ತಾರೆಯೇ ವಿನಃ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಪಾದಚಾರಿಗಳ ದೂರು.
ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಅವ್ಯವಸ್ಥೆ
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ವಾಹನಗಳನ್ನು ಸರಿಯಾಗಿ ಪಾರ್ಕಿಂಗ್ ಮಾಡದಿರುವ ಪರಿಣಾಮ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ನಿತ್ಯವೂ ಸಮಸ್ಯೆ ಎದುರಾಗಿದೆ. ಶ್ರೀ ಭುವನೇಶ್ವರಿ ವೃತ್ತದ ಸಮೀಪದಲ್ಲೇ ಇರುವ ಕೆನರಾ ಬ್ಯಾಂಕ್ ಮುಂಭಾಗದ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಲ್ಲಿಂದ ತಾಲೂಕು ಕಚೇರಿಯವರೆಗೂ ಇದೇ ಸಮಸ್ಯೆ ಕಂಡುಬರುತ್ತಿದೆ. ಈ ಮಾರ್ಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಾಗಿ ಸಾಗುವುದರಿಂದ ಕಿರಿಕಿರಿ ಉಂಟಾಗುತ್ತಿದೆ. ಈ ಮೊದಲು ಜಿಲ್ಲಾಸ್ಪತ್ರೆ ಮುಂಭಾಗ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಟ್ರಾಫಿಕ್ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಜಿಲ್ಲಾಸ್ಪತ್ರೆಯ ನೆಲ ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದರು. ಪರಿಣಾಮ ಸಮಸ್ಯೆಗೆ ಪರಿಹಾರ ದೊರಕಿದಂತಾಯಿತು. ಇದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಇಂತಹ ಪರಿಹಾರವನ್ನು ಎಲ್ಲ ರಸ್ತೆಗಳಲ್ಲೂ ಕಂಡುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ನಗರಸಭೆ ಮುಂಭಾಗದಲ್ಲೂ ಸಮಸ್ಯೆ
ವಿವಿಧ ಕೆಲಸ-ಕಾರ್ಯಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ನಗರಸಭೆ ಕಚೇರಿಗೆ ಜನರು ಭೇಟಿ ನೀಡುತ್ತಾರೆ. ಕಚೇರಿಗೆ ಬರುವವರು ಕಚೇರಿ ಮುಂಭಾಗ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ತೆರಳುವುದು ಸಾಮಾನ್ಯವಾಗಿದೆ. ಅಂತೆಯೆ ಶ್ರೀ ಚಾಮರಾಜೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಕಾರುಗಳನ್ನೂ ನಿಲುಗಡೆ ಮಾಡಲಾಗುತ್ತದೆ. ಇದರಿಂದ ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗುತ್ತಿದೆ. ಇದರ ನಡುವೆ ಬೀದಿ ಬದಿಯ ತಳ್ಳುಗಾಡಿ ವ್ಯಾಪಾರಿಗಳು ಸೂಕ್ತ ಜಾಗದಲ್ಲಿ ಗಾಡಿಗಳನ್ನು ನಿಲ್ಲಿಸದಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸಂಚಾರ ಪೊಲೀಸರು ಎಚ್ಚೆತ್ತು ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕಿದೆ.
ಪಾರ್ಕಿಂಗ್ ಜತೆಗೆ ಫುಟ್‌ಪಾತ್
ನಗರದಲ್ಲಿ ಪಾರ್ಕಿಂಗ್ ಅವ್ಯವಸ್ಥೆಗೆ ಫುಟ್‌ಪಾತ್ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳ್ಳದಿರುವುದೂ ಕಾರಣವಾಗಿದೆ. ಬಿ.ರಾಚಯ್ಯ ಜೋಡಿ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಫುಟ್‌ಪಾತ್ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ. ಫುಟ್‌ಪಾತ್ ಸಿದ್ಧವಾಗಿರುವ ರಸ್ತೆಗಳಲ್ಲಿ ತಳ್ಳುಗಾಡಿಗಳು ಹಾಗೂ ಚಾಟ್ಸ್ ಅಂಗಡಿಗಳನ್ನು ಫುಟ್‌ಪಾತ್ ಮೇಲೆಯೇ ನಿಲ್ಲಿಸಿಕೊಂಡು ವ್ಯಾಪಾರ ಮಾಡುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಓಡಾಡಬೇಕಾಗಿದೆ.
ಪಾರ್ಕಿಂಗ್ ಜಾಗವನ್ನು ಬೀದಿಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿರುವುದರಿಂದ ವಾಹನಗಳನ್ನು ರಸ್ತೆಯಲ್ಲೇ ಪಾರ್ಕಿಂಗ್ ಮಾಡಲಾಗುತ್ತಿದೆ. ಬಿ.ರಾಚಯ್ಯ ಜೋಡಿ ರಸ್ತೆ, ರಥದ ಬೀದಿ ಹಾಗೂ ಡಿವಿಯೇಷನ್ ರಸ್ತೆಯಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ದೊರೆತರೆ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂಬುದು ಜನರ ಅಭಿಪ್ರಾಯ.
ಕೆಲವು ರಸ್ತೆಗಳಲ್ಲಿ ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಆದರೆ ಮತ್ತಷ್ಟು ರಸ್ತೆಗಳಲ್ಲಿ ಪಾರ್ಕಿಂಗ್‌ನದ್ದೆ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ.ಜೆ.ಮಂಜು, ನ್ಯಾಯಾಲಯ ರಸ್ತೆ, ನಿವಾಸಿ, ಚಾಮರಾಜನಗರ ನಗರದ ಪ್ರಮುಖ ರಸ್ತೆಯಾದ ಬಿ.ರಾಚಯ್ಯ ಜೋಡಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಡಿವಿಯೇಷನ್ ರಸ್ತೆಯಲ್ಲಿ ಪಾರ್ಕಿಂಗ್ ಸಮಸ್ಯೆ ಕಂಡುಬರುತ್ತಿದೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ.ಕೃಷ್ಣಮೂರ್ತಿ ಪಾದಚಾರಿ, ಚಂಗಚಹಳ್ಳಿ