

ಕೊಳ್ಳೇಗಾಲ: ಪಟ್ಟಣದಲ್ಲಿ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವ್ಯೆದ್ಯಕೀಯ ಸೌಲಭ್ಯ ಯೋಜನೆಯ ನೋಂದಣಿ ಅಭಿಯಾನ ಗುರುವಾರ ಯಶಸ್ವಿಯಾಗಿ ನಡೆಯಿತು.
ಕಾರ್ಮಿಕ ಇಲಾಖೆ ನಿರೀಕ್ಷಕರ ಕಚೇರಿಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಇ- ಶ್ರಮ ಕಾರ್ಡ್ ನೋಂದಣಿ ಅಭಿಯಾನವನ್ನು ಗುರುವಾರ ಬೆಳಗ್ಗೆ 10 ರಿಂದ 5 ಗಂಟೆವರೆಗೆ ಹಮ್ಮಿಕೊಳ್ಳಲಾಗಿತ್ತು. ವಿವಿಧ ಪತ್ರಿಕೆಗಳ ಏಜೆಂಟರು ಹಾಗೂ ವಿತರಕರು ಭಾಗವಹಿಸಿ ಇ-ಶ್ರಮ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡರು. ನಂತರ ಕಾರ್ಮಿಕ ನಿರೀಕ್ಷಕ ಎಲ್.ವಿ ಪ್ರಸಾದ್ ನೋಂದಾಯಿತರಿಗೆ ಇ-ಶ್ರಮ ಕಾರ್ಡ್‌ಗಳನ್ನು ನೀಡಿದರು.
ಬಳಿಕ ಮಾತನಾಡಿ, ಅಸಂಘಟಿತ ವರ್ಗಕ್ಕೆ ಸೇರುವ ಪತ್ರಿಕಾ ವಿತರಕರಿಗೆ ಇ-ಶ್ರಮ ಕಾರ್ಡ್ ಯೋಜನೆಯಡಿ ಸರ್ಕಾರ ಅಪಘಾತ ವಿಮೆ ಹಾಗೂ ವ್ಯೆದ್ಯಕೀಯ ಸೌಲಭ್ಯವನ್ನು ನೀಡುತ್ತಿದೆ. ಪತ್ರಿಕಾ ವಿತರಕರು ದಿನಪತ್ರಿಕೆ ಹಂಚಲು ದ್ವಿಚಕ್ರ ವಾಹನವನ್ನೇ ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂ. ವಿಮಾ ಸೌಲಭ್ಯ, ಶಾಶ್ವತ ದುರ್ಬಲತೆಗೆ ಒಳಗಾದರೆ 2 ಲಕ್ಷ ರೂ. ಹಾಗೂ ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ 1 ಲಕ್ಷ ರೂ.ವರೆಗೆ ಆಸ್ಪತ್ರೆ ವೆಚ್ಚವನ್ನು ಮರುಪಾವತಿ ಮಾಡಲಾಗುವುದು ಎಂದರು.
ಫಲಾನುಭವಿ ಅಪಘಾತ ಸಂಭವಿಸಿದ 1 ವರ್ಷದೊಳಗೆ ಹಾಗೂ ವ್ಯೆದ್ಯಕೀಯ ಸೌಲಭ್ಯ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದ 1 ವರ್ಷದೊಳಗೆ ಇ-ಶ್ರಮ ಪೋರ್ಟಲ್‌ನಲ್ಲಿ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚ ಪಾವತಿಗೆ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಪತ್ರಿಕಾ ವಿತರಕ ಸಂಘದ ಕಾರ್ಯದರ್ಶಿ ಸುರೇಂದ್ರ, ಉಪಾಧ್ಯಕ್ಷ ಲಿಂಗರಾಜು, ಏಜೆಂಟರಾದ ಮಲ್ಲೇಶ್, ಶಾಂತರಾಜು, ರಾಜಶೇಖರ್ ಕುಂತೂರು, ಮಹದೇವ, ದೊರೆ, ಗಿರೀಶ್, ಮಲ್ಲಿಕಾರ್ಜುನ ಅಗರ, ನಾಗ, ರಾಜು, ಸಿದ್ದರಾಜು ಬಸ್ತೀಪುರ, ನಂಜುಂಡಸ್ವಾಮಿ, ಸಿದ್ದಪ್ಪ, ಸೂರ್ಯ, ಅಸಂಘಟಿತ ಕಾರ್ಮಿಕ ಮಂಡಳಿಯ ನೌಕರ ಶ್ರೀಧರ್, ಕಟ್ಟಡ ಕಾರ್ಮಿಕ ಮಂಡಳಿಯ ಸಿಬ್ಬಂದಿ ಸುನೀಲ್‌ಕುಮಾರ್, ಅನಿಲ್‌ಕುಮಾರ್ ಇದ್ದರು.
ದೊರೆಯುವ ವ್ಯೆದ್ಯಕೀಯ ಸೌಲಭ್ಯಗಳು: ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಇಎನ್‌ಟಿ, ನೇತ್ರ ಶಸ್ತ್ರಚಿಕಿತ್ಸೆ, ಪಾರ್ಶ್ಚವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ, ಅಸ್ತಮಾ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗಳು, ಮಿದುಳಿನ ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಅಲ್ಸರ್, ಕಿಡ್ನಿ, ನರರೋಗ ಚಿಕಿತ್ಸೆ, ವ್ಯಾಸ್ಕೂಲರ್ ಚಿಕಿತ್ಸೆ, ಅನ್ನನಾಳ, ಕರುಳಿನ ಚಿಕಿತ್ಸೆ ಸಂಬಂಧಿಸಿದಂತೆ ಫಲಾನುಭವಿಗೆ ವೈದ್ಯಕೀಯ ಮೊತ್ತವನ್ನು ಪಾವತಿ ಮಾಡಲಾಗುತ್ತದೆ.
ಪತ್ರಿಕಾ ವಿತರಕರ ಸಂಕಷ್ಟಕ್ಕೆ ಸರ್ಕಾರ ನೆರವಾಗಿದೆ. ಇದೀಗ 2 ಲಕ್ಷ ರೂ. ಅಪಘಾತ ವಿಮಾ ಚಿಕಿತ್ಸಾ ಸೌಲಭ್ಯ ನೀಡಿದೆ. ಪ್ರಚಲಿತ ಸುದ್ದಿ-ಸಮಾಚಾರಗಳನ್ನು ಪತ್ರಿಕೆಗಳ ಮೂಲಕ ಹಂಚುವ ನಮಗೆ ಮತ್ತಷ್ಟೂ ಸಹಕಾರ ಅಗತ್ಯವಿದೆ. ಸಂಪಾದನೆ ಕಡಿಮೆ, ಜವಾಬ್ದಾರಿ ಜಾಸ್ತಿ. ಆರ್ಥಿಕ ಅವ್ಯವಸ್ಥೆಯಲ್ಲೆ ಜೀವನ ದೂಡುತ್ತೇವೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಯಂತೆ ಪತ್ರಿಕಾ ವಿತರಕರಿಗೂ ಆರ್ಥಿಕ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು.ರಫತ್‌ವುಲ್ಲಾ ಖಾನ್, ಗೌರವಾಧ್ಯಕ್ಷ, ಪತ್ರಿಕಾ ವಿತರಕರ ಸಂಘ, ಕೊಳ್ಳೇಗಾಲ
ರಾಜ್ಯ ಸರ್ಕಾರ ಪತ್ರಿಕಾ ವಿತರಕರಿಗೆ ಅಪಘಾತ ವಿಮೆ ಹಾಗೂ ವ್ಯೆದ್ಯಕೀಯ ಸೌಲಭ್ಯ ನೀಡಿರುವುದು ಸಂತಸದ ವಿಚಾರ. ಆದರೆ, ಗಂಭೀರ ಕಾಯಿಲೆಗಳಿಗೆ ಆಸ್ಪತ್ರೆ ವೆಚ್ಚವಾಗಿ 1 ಲಕ್ಷ ರೂ. ನೀಡಲಾಗುತ್ತಿದೆ. ಇದನ್ನು 2 ಲಕ್ಷ ರೂ.ಗೆ ಹೆಚ್ಚಿಸಬೇಕು. ಏಕೆಂದರೆ ಪತ್ರಿಕಾ ವಿತರಕರು ಆಸ್ತಿವಂತರಲ್ಲ, ಇದನ್ನು ಸರ್ಕಾರ ಪರಿಗಣಿಸಬೇಕಿದೆ.ಮಲ್ಲೇಶ್, ವಿಜಯವಾಣಿ ಪತ್ರಿಕಾ ಪ್ರತಿನಿಧಿ, ಕೊಳ್ಳೇಗಾಲ