ಸರ್ಕಾರಿ ಭೂಮಿ ಅತಿಕ್ರಮಣ ಆರೋಪ

punajanuru doreswamy
Published on

ಚಾಮರಾಜನಗರ: ತಾಲೂಕಿನ ಪುಣಜನೂರು ಗ್ರಾಮದಲ್ಲಿ ಸರ್ಕಾರಿ ಜಮೀನೊಂದನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪುಣಜನೂರು ದೊರೆಸ್ವಾಮಿ ಆರೋಪಿಸಿದರು.

ಖಾದಿ ಗ್ರಾಮೋದ್ಯೋಗ ಇಲಾಖೆಗೆ ಪುಣಜನೂರು ಗ್ರಾಮದ ಗುಡ್ಡಗಾಡು ಪ್ರದೇಶವನ್ನು ನೀಡಲಾಗಿತ್ತು. ಈ ಜಮೀನಿನಲ್ಲಿ ಜೇನು ಕೃಷಿ ಮತ್ತು ತೆಂಗಿನನಾರು ಉತ್ಪಾದನಾ ಉದ್ಯಮ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ದಿನ ಕಳೆದಂತೆ ಇದು ನಶಿಸಿ ಹೋಯಿತು. ನಂತರ ಈ ಜಮೀನಿನಲ್ಲೇ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಅತಿಥಿಗೃಹ ಮತ್ತು ಆರ್‌ಟಿಒ ಚೆಕ್‌ಪೋಸ್ಟ್ ತೆರೆಯಲು 2 ಎಕರೆ ಜಮೀನನ್ನು ಖರೀದಿ ಮಾಡಲಾಗಿತ್ತು. ಆದರೆ ಇಲ್ಲಿ ಕಟ್ಟಡ ನಿರ್ಮಾಣ ಮಾಡದೆ ಖಾಸಗಿಯವರಿಗೆ ಬಾಡಿಗೆ ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಈ ರೀತಿ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರುವ ಖಾಸಗಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಿವೃತ್ತ ವಲಯ ಅರಣ್ಯಾಧಿಕಾರಿ ಚಿನ್ನಸ್ವಾಮಿ, ಪುಣಜನೂರು ರಂಗಸ್ವಾಮಿನಾಯಕ, ರೈತ ಮುಖಂಡ ಕಾಡಳ್ಳಿ ಚಿನ್ನಸ್ವಾಮಿ, ಮಹದೇವಯ್ಯ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net