

ಕೊಳ್ಳೇಗಾಲ: ಸಿನಿಮಾ ವೀಕ್ಷಣೆ ವೇಳೆ ಐವರು ಯುವಕರ ಗುಂಪು ಮಂಗಳವಾರ ವ್ಯಕ್ತಿಯೊಬ್ಬನ ಮೇಲೆ ಗಾಜಿನ ಬಾಟಲ್ ಎಸೆದು ಗಾಯಗೊಳಿಸಿದ್ದು, ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ಳೇಗಾಲ ತಾಲೂಕು ಮಧುವನಹಳ್ಳಿ ಗ್ರಾಮದ ಚಿಕ್ಕತಾಂಡವಶೆಟ್ಟಿ(40) ಗಾಯಾಳು. ಇವರು ಪಟ್ಟಣದ ಶ್ರೀನಿವಾಸ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು. ಈ ವೇಳೆ ತನ್ನಷ್ಟಕ್ಕೆ ತಾನೇ ಇಂಗ್ಲಿಷ್, ತೆಲುಗು ಭಾಷೆಯಲ್ಲಿ ಏನೇನೋ ಮಾತನಾಡುತ್ತಿದ್ದಾಗ ಹಿಂಬದಿ ಕುಳಿತಿದ್ದ ಅಪರಿಚಿತ ಐವರ ಪೈಕಿ ಒಬ್ಬ ಚಿಕ್ಕತಾಂಡವಶೆಟ್ಟಿ ಅವರ ತಲೆಗೆ ಏಕಾಏಕಿ ಗಾಜಿನ ಬಾಟಲ್ ಎಸೆದು ಗಾಯಗೊಳಿಸಿದ್ದಲ್ಲದೆ, ಗುಂಪು ಜಗಳಕ್ಕೆ ಇಳಿದಿದೆ. ಅಲ್ಲಿದ್ದ ಕೆಲವರು ಗಾಯಾಳುವನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿಗಳು ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದವರು ಎನ್ನಲಾಗಿದ್ದು, ಅವರ ಹೆಸರು, ವಿಳಾಸ ತಿಳಿದುಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕತಾಂಡವಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.