

ಚಾಮರಾಜನಗರ : ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಸಾಲ-ಸೌಲಭ್ಯ ಪಡೆದ ಮಹಿಳೆಯರು ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ರಾಮಸಮುದ್ರ ಪೂರ್ವ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶ್ರೀಕಾಂತ್ ಸಲಹೆ ನೀಡಿದರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಸೋಮವಾರ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಸಣಾಪುರ ವಲಯದ ವತಿಯಿಂದ ಆಯೋಜಿಸಿದ್ದ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದರಿಂದ ಸಾಕಷ್ಟು ಮಹಿಳೆಯರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಸಂಸ್ಥೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಹಿಳೆಯರಿಗೆ ಜಾಗೃತಿ, ಆರ್ಥಿಕ ಸ್ವಾವಲಂಬನೆ, ಕುಟುಂಬದ ಸದೃಢಕ್ಕಾಗಿ ಸಂಸ್ಥೆಯು ಅತ್ಯಂತ ಸಹಕಾರಿಯಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ದಿವಾಕರ್, ಸದಸ್ಯರಾದ ಶಂಕರ್, ಮಣಿಕಂಠಸ್ವಾಮಿ, ಪೂವಮ್ಮ, ರಾಜಮ್ಮ, ರವಿಕುಮಾರ್, ಮಹದೇವಯ್ಯ, ರಂಗಶೆಟ್ಟಿ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಪ್ರವೀಣ್, ಸೇವಾ ಪ್ರತಿನಿಧಿಗಳಾದ ಕಮಲಾಕ್ಷಿ, ರಾಜಮ್ಮ, ಮಹದೇವಮ್ಮ, ನಿರ್ಮಲಾ ಭಾಗವಹಿಸಿದ್ದರು.