ವಿದ್ಯುತ್ ಕಡಿತ ಗ್ರಾಮಗಳಿಗೆ ನಿಜಗುಣರಾಜು ಭೇಟಿ

15raju3
Published on

ಚಾಮರಾಜನಗರ: ಭಾಗ್ಯಜ್ಯೋತಿ ವಿದ್ಯುತ್ ಸಂರ್ಪಕ ಕಡಿತಗೊಂಡಿರುವ ತಾಲೂಕಿನ ವಿವಿಧ ಗ್ರಾಮಗಳಿಗೆ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ನಿಜಗುಣರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಬದನಗುಪ್ಪೆ, ಮೇಲಾಜಿಪುರ, ಬೆಂಡರವಾಡಿ, ಮಲ್ಲಯ್ಯನಪುರ, ಹೆಗ್ಗೋಠಾರ, ಮುತ್ತಿಗೆ ಗ್ರಾಮಗಳಲ್ಲಿ ಭಾಗ್ಯಜ್ಯೋತಿ ವಿದ್ಯುತ್ ಬಾಕಿ ಪಾವತಿಯನ್ನು ಉಳಿಸಿಕೊಂಡಿರುವುದಕ್ಕೆ ಸಂಪರ್ಕ ಕಡಿತಗೊಳಿಸಲಾಗಿತ್ತು. ಈ ವಿಷಯ ತಿಳಿದ ತಕ್ಷಣ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ, ಸ್ಥಳದಲ್ಲೇ ಇಂಧನ ಸಚಿವ ಸುನೀಲ್‌ಕುಮಾರ್, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಚನ್ನಬಸವೇಶ್ವರ ಅವರಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚನೆ ನೀಡುವಂತೆ ಕೋರಿದರು.


ಬದನಗುಪ್ಪೆ ಗ್ರಾಮಕ್ಕೆ ಭೇಟಿ ನೀಡಿದಾಗ ಸೆಸ್ಕ್ ಎಂಡಿ ಜಯವಿಭವಸ್ವಾಮಿ ಅವರಿಗೆ ಕರೆ ಮಾಡಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವಿದ್ಯುತ್ ಸಂಪರ್ಕ ಕೊಡಿಸಲು ಸೂಚಿಸಿದರು. ಸಂಪರ್ಕ ಕಲ್ಪಿಸುವ ತನಕ ಸ್ಥಳದಲ್ಲೇ ಇದ್ದರು. ಬಳಿಕ 500 ರೂ. ಶುಲ್ಕ ಕಟ್ಟಿ, ಬಾಕಿ ಪಾವತಿ ಕಡಿಮೆ ಮಾಡಿಕೊಳ್ಳಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.


ತಾಪಂ ಮಾಜಿ ಅಧ್ಯಕ್ಷ ಬಸವಣ್ಣ ಮಾತನಾಡಿ, ಬದನಗುಪ್ಪೆ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಳಿಸಲಾಗಿತ್ತು. ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ಸ್ಥಳಕ್ಕೆ ಆಗಮಿಸಿ ಇಂಧನ ಸಚಿವರಿಗೆ ತಿಳಿಸಿದ ಬಳಿಕ ತಕ್ಷಣ ಕೆಲವು ಮನೆಗಳಿಗೆ ಬೆಳಕು ಸಿಕ್ಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net