ಚಾಮರಾಜನಗರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೇ ಸಂವಿಧಾನ ಬದಲಾಯಿಸುತ್ತಾರೆ ಆಗಾಗಿ ಬಿಎಸ್ಪಿಗೆ ಮತ ನೀಡದೇ ಕಾಂಗ್ರೆಸ್‌ಗೆ ಮತನೀಡಿ ಎಂದು ಅಪಪ್ರಚಾರ ಮಾಡಿದ ಪರಿಣಾಮ ಪಕ್ಷಕ್ಕೆ ಕಡಿಮೆ ಮತ ಬರುವಂತಾಯಿತು ಎಂದು ಬಿಎಸ್ಪಿ ಪರಾಜಿತ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಹೇಳಿದರು.
ಚುನಾವಣೆಯಲ್ಲಿ ಸೋತರು ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷ ಸಂಘಟಿಸುತ್ತೇನೆ. ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಯಾವುದೇ ಕೆಲಸವಿದ್ದರೂ ಜನರು ಪಕ್ಷದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕಸಭಾ ಕ್ಷೇತ್ರದ 15,903 ಮತದಾರರು ಕಾಂಗ್ರೆಸ್, ಬಿಜೆಪಿ ಆಮಿಷಕ್ಕೆ ಬಲಿಯಾಗದೇ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಿರುವ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 1.88 ಲಕ್ಷ ಅಂತರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ಬೋಸ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಅವರು ತಮ್ಮ ತಂದೆ ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಕ್ಷೇತ್ರದ 7 ಶಾಸಕರ ಜತೆಗೂಡಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಬೇಕು ಎಂದರು.
ದೇಶದಲ್ಲಿ ಬಿಜೆಪಿ ಗೆದ್ದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ಹಾಗೂ ಕೆಲ ಮುಖಂಡರು ಹಳ್ಳಿ ಹಳ್ಳಿಗಳಿಗೆ ಹೋಗಿ ಬಿಎಸ್ಪಿಗೆ ಮತ ಹಾಕದೇ ಕಾಂಗ್ರೆಸ್‌ಗೆ ಮತ ಹಾಕುವಂತೆ ಅಪಪ್ರಚಾರ ಮಾಡಿದ ಪರಿಣಾಮ ಬಿಎಸ್ಪಿ ಕಡಿಮೆ ಮತ ಪಡೆಯಲು ಸಾಧ್ಯವಾಯಿತು. ಸಂವಿಧಾನ ಉಳಿಸುವ ಉದ್ದೇಶದಿಂದ 1984ರಲ್ಲಿ ಕಾನ್ಶಿರಾಂ ಅವರು ಬಿಎಸ್ಪಿ ಪಕ್ಷವನ್ನು ಸ್ಥಾಪನೆ ಮಾಡಿದರು. ಅಲ್ಲಿಯ ತನಕ ದೇಶದಲ್ಲಿ ಕಾಂಗ್ರೆಸ್, ಜನತಾಪಕ್ಷ ಹಾಗೂ ಬಿಜೆಪಿ ಪಕ್ಷಗಳು ಸಂವಿಧಾನದ ಬಗ್ಗೆ ಮಾತನಾಡಿರಲಿಲ್ಲ.
ಬಿಎಸ್ಪಿ 3 ಎಂಪಿ ಹಾಗೂ 11 ಎಂಎಲ್‌ಎಗಳನ್ನು ಗೆಲ್ಲುವ ತನಕ ಯಾವುದೇ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಲಿಲ್ಲ. 1999ರಲ್ಲಿ ವಾಜಪೇಯಿ ಅವರು ಸಂವಿಧಾನ ಪರಾಮರ್ಶನಾ ಆಯೋಗ ರಚನೆ ಮಾಡಿದಾಗ ಬಿಎಸ್ಪಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ರ‌್ಯಾಲಿ ಮಾಡಿ ಸಂವಿಧಾನ ಉಳಿಸಲು ಜನರಲ್ಲಿ ಜಾಗೃತಿ ಮೂಡಿಸಿದರು ಎಂದರು. ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪದಾಧಿಕಾರಿಗಳಾದ ರಾಜಶೇಖರ್, ಪ್ರಕಾಶ್, ಕೃಷ್ಣಮೂರ್ತಿ, ರಂಗಸ್ವಾಮಿ ಹಾಜರಿದ್ದರು.