

ಚಾಮರಾಜನಗರ : ರಾಜ್ಯ ವಿಧಾನಪರಿಷತ್‌ಗೆ ಜೂ.3 ರಂದು ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸುಶಿಕ್ಷಿತ ಮತದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತವನ್ನು ತುಲನೆ ಮಾಡುವ ಮೂಲಕ ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಮನವಿ ಮಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 5 ಗ್ಯಾರಂಟಿ ಯೋಜನೆಗಳ ಮೂಲಕ ಬಡ ಜನರಿಗೆ ನೆರವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಬದಲಾವಣೆಯಾಗಿದ್ದರೆ, ಅದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಸಾಧ್ಯವಾಗಿದೆ. ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 1242 ಉಪನ್ಯಾಸಕರು ಮತ್ತು 330 ಜನ ಪ್ರಾಂಶುಪಾಲರ ಹುದ್ದೆ ನೇಮಕಾತಿ ಪಟ್ಟಿ ಸಿದ್ಧವಾಗಿದೆ. ಶಿಕ್ಷಕ ವರ್ಗದ ಹಿತ ಕಾಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ನೇಮಕಾತಿಗಳನ್ನು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡಲು ಸಿದ್ಧವಿದೆ. ಜೆಡಿಎಸ್ ಮತ್ತು ಬಿಜೆಪಿ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಉಪಯೋಗಿ ಕೆಲಸಗಳನ್ನು ಮಾಡಿಲ್ಲ. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಹೆಚ್ಚಳ, ಮಹಿಳೆಯರಿಗೆ ವೇತನ ಸಹಿತ ರಜೆ, ಸೇವಾ ಭದ್ರತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಚಿಂತಿಸುತ್ತಿದೆ. ಶಿಕ್ಷಕರು ಯಾವುದೇ ಆಮಿಷಗಳಿಗೆ ಒಳಗಾಗದೆ ಈ ಬಾರಿ ಮತ್ತೊಮ್ಮೆ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.
ಗೋಷ್ಠಿಯಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡ ಮಹಾದೇವಶೆಟ್ಟಿ, ಆರ್.ಮಹದೇವ್, ಮೊಹಮ್ಮದ್ ಅಸ್ಗರ್ ಮುನ್ನಾ, ಮಧುಸೂದನ್, ಶೇಖರಪ್ಪ, ನಾಗೇಂದ್ರ ನಾಯಕ್ ಹಾಜರಿದ್ದರು.