

ಚಾಮರಾಜನಗರ:ಆಷಾಢ ಏಕಾದಶಿಯ ಅಂಗವಾಗಿ ವಿಷ್ಣು ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ನಗರದ ಕೊಳದ ಬೀದಿಯಲ್ಲಿರುವ ಕಾಡುನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪ್ರಥಮ ಏಕಾದಶಿ ಅಂಗವಾಗಿ ಶ್ರೀಭೂದೇವಿ ಸಮೇತ ಕಾಡು ನಾರಾಯಣಸ್ವಾಮಿ ದೇವಸ್ಥಾನದಿಂದ ಕೊಳದ ಗಣಪತಿ ದೇವಸ್ಥಾನದವರೆಗೆ ದೇವರ ಉತ್ಸವ ಮಾಡಲಾಯಿತು. ನಂತರ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಯಿತು.ಬೆಳಗ್ಗೆಯಿಂದಲೂ ದೇವರಿಗೆ ಪಂಚಾಮೃತ ಅಭೀಷೇಕ ಹಾಗೂ ವಿಶೇಷ ಅರ್ಚನೆ ನೆರವೇರಿಸಲಾಯಿತು. ದೇವರ ವಿಗ್ರಹಗಳನ್ನು ವಿವಿಧ ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು.
ಈ ವರ್ಷದ ಪ್ರಥಮ ಆಷಾಢ ಏಕಾದಶಿ ನಿಮಿತ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೆವಾಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಲವಾರು ಭಕ್ತರು ಉಪವಾಸವಿದ್ದು ವಿಷ್ಣು ಸಹಸ್ರನಾಮ ಪಠಿಸಿ, ದೇವರಿಗೆ ತುಳಸಿ ಅರ್ಪಿಸುವ ಮೂಲಕ ಶ್ರದ್ಧಾಭಕ್ತಿ ಮೆರೆದರು.