ಜ. 26ರಂದು ಮಹತ್ವದ ಸಂವಿಧಾನ ಜಾಗೃತಿ ಜಾಥಾಗೆ ವಿದ್ಯುಕ್ತ ಚಾಲನೆ : ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್

k.venkatesh
Published on

ಚಾಮರಾಜನಗರ: ಭಾರತ ಸಂವಿಧಾನದ 75ನೇ ವರ್ಷದ ಆಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ಶೀರ್ಷಿಕೆಯಡಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ರಾಜ್ಯ ಸರ್ಕಾರವು ಫೆಬ್ರವರಿ 25ರಂದು ಆಯೋಜಿಸಿರುವ ಹಿನ್ನೆಲೆಯಲ್ಲಿ ಜನವರಿ 26ರಂದು ಬೆಳಿಗ್ಗೆ 9 ಗಂಟೆಗೆ ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಲಾಗುವುದೆಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದ್ದಾರೆ.

ಜನವರಿ 26ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅದೇ ದಿನದಂದು ಚಾಮರಾಜನಗರ ಜಿಲ್ಲೆಯಲ್ಲೂ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಒಳಗೊಂಡ ಸಂವಿಧಾನ ಜಾಗೃತಿ ಸ್ತಬ್ಧಚಿತ್ರಕ್ಕೆ ಚಾಲನೆ ನೀಡಲಾಗುತ್ತದೆ.

ಚಾಮರಾಜನಗರ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಕುರಿತ ಎರಡು ಸ್ತಬ್ಧಚಿತ್ರಗಳು ಸಿದ್ದಗೊಂಡಿದ್ದು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂದು ಸ್ತಬ್ಧಚಿತ್ರ ಮತ್ತು ಕೊಳ್ಳೇಗಾಲ, ಹನೂರು, ಯಳಂದೂರು ತಾಲ್ಲೂಕಿನಲ್ಲಿ ಮತ್ತೊಂದು ಸ್ತಬ್ಧಚಿತ್ರ ವಾಹನವು ಎಲ್ಲಾ ಗ್ರಾಮ ಪಂಚಾಯಿತಿ, ನಗರ ಪಟ್ಟಣಗಳಲ್ಲಿ ಸಂಚರಿಸಲಿದೆ. ಕೊಳ್ಳೇಗಾಲಕ್ಕೆ ಸಂಬಂಧಿಸಿದ ಸ್ತಬ್ಧಚಿತ್ರವನ್ನು ಕೊಳ್ಳೇಗಾಲ ಶಾಸಕರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಚಾಲನೆ ನೀಡಲಿದ್ದಾರೆ.

ಜನವರಿ 26ರಿಂದ ಫೆಬ್ರವರಿ 23ರವರೆಗೆ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆಯು ಜಿಲ್ಲಾದ್ಯಂತ ಸಂಚರಿಸಲಿದ್ದು, ಈ ಕಾರ್ಯಕ್ರಮವು ಬಹಳ ಮಹತ್ತರವಾಗಿದೆ. ಸಂವಿಧಾನದ ಹಾಗೂ ಜನರ ಹಕ್ಕುಗಳ ಬಗ್ಗೆ, ದೇಶದ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಇಲ್ಲಿನ ಅಸ್ಮಿತೆಗಳ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ, ನಗರ ಪಟ್ಟಣಗಳ ವ್ಯಾಪ್ತಿಯಲ್ಲಿ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ಹೊರಟು ಅಂತಿಮವಾಗಿ ಆಯಾಯ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ, ನಗರ ಪಟ್ಟಣಗಳಲ್ಲಿ ವೇದಿಕೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.

ಎರಡು ಎಲ್‌ಇಡಿ ಮೌಂಟೆಡ್ ಜಾಗೃತಿ ಸ್ತಬ್ದಚಿತ್ರಗಳಿಗೆ ರೂಟ್ ಮ್ಯಾಪ್ ಸಿದ್ದಪಡಿಸಲಾಗಿದೆ. ಸರ್ಕಾರದ ಕಾರ್ಯಕ್ರಮಗಳು, ಭಾರತದ ಸಂವಿಧಾನ ಮತ್ತು ಇಂದಿನ ಪ್ರಸ್ತುತತೆ, ಸಂವಿಧಾನದ ತತ್ವಗಳು, ಬಸವ ತತ್ವ ಮತ್ತು ಸಂವಿಧಾನದಲ್ಲಿ ಅದರ ಅಳವಡಿಕೆ, ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಸ್ತಬ್ದ ಚಿತ್ರಗಳ ಮೂಲಕ ಅರಿವು ಮೂಡಿಸಲಾಗುತ್ತದೆ. ಗ್ರಾಮ ಪಂಚಾಯಿತಿಗಳಿಗೆ ತಲುಪಿದಾಗ ಗ್ರಾಮ ಪಂಚಾಯಿತಿ ಸ್ಥಳದಿಂದ ಕಾರ್ಯಕ್ರಮದ ಸ್ಥಳಕ್ಕೆ ಕಲಾತಂಡಗಳು, ಡಾ. ಬಿ.ಆರ್. ಅಂಬೇಡ್ಕರ್‌ರವರ ಗೀತಾ ಗಾಯನಗಳ ಮೂಲಕ ಮೆರವಣಿಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಭಾಗವಹಿಸಲಿದ್ದಾರೆ. ಚಾಮರಾಜನಗರದ ನಗರಸಭೆ ಮತ್ತು ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಜನವರಿ 26ರಂದು ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ಇರುತ್ತದೆ. ಚಾಮರಾಜನಗರದ ನಗರಸಭಾ ಕಾರ್ಯಾಲಯದ ಆವರಣ ಮತ್ತು ಕೊಳ್ಳೇಗಾಲದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜನವರಿ 27 ರಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ, ಇತರೆ ನಗರ, ಪಟ್ಟಣ ಪ್ರದೇಶಗಳಿಗೆ ಜಾಥಾ ಹೊರಡಲಿದೆ.

ಫೆಬ್ರವರಿ 23 ರಂದು ಜಿಲ್ಲೆಯಲ್ಲಿ ಸ್ತಬ್ಧಚಿತ್ರಗಳು ಸಂಚಾರ ಮುಕ್ತಾಯವಾಗಲಿದೆ. ಫೆಬ್ರವರಿ 24 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರದ ಪ್ರದರ್ಶನವಿರುತ್ತದೆ. ಫೆಬ್ರವರಿ 25ರಂದು ರಾಷ್ಟ್ರೀಯ ಸಮಾವೇಶ ನಡೆಯಲಿದ್ದು ಕರ್ನಾಟಕ ರಾಜ್ಯ ಸರ್ಕಾರವು ಅತ್ಯಂತ ವಿಶೇಷವಾಗಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುತ್ತಿದೆ.

ಈ ಮಹತ್ವದ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ನಾಗರಿಕರು, ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ವಿವಿಧ ಪಕ್ಷದ ಮುಖಂಡರು, ಎಲ್ಲಾ ಸಮುದಾಯದ ಯಜಮಾನರು ಮತ್ತು ಮುಖಂಡರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net