ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

04chn11
Published on

ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಎಲ್ಲ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರದೊಂದಿಗೆ ಜ.26ರಂದು ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಗಣರಾಜ್ಯೋತ್ಸವವನ್ನು ಎಲ್ಲ ಅಗತ್ಯ ಸಿದ್ಧತೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಎಲ್ಲ ಗ್ರಾಮ ಪಂಚಾಯಿತಿ ಕಚೇರಿ, ಕೇಂದ್ರ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಶಾಲಾ- ಕಾಲೇಜುಗಳಲ್ಲಿ ಕಡ್ಡಾಯವಾಗಿ ಗಣರಾಜ್ಯೋತ್ಸವ ಆಚರಣೆಯಾಗಬೇಕು. ಶಿಸ್ತುಬದ್ಧವಾಗಿ ಆಯೋಜನೆ ಮಾಡಬೇಕು. ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಗಣರಾಜ್ಯೋತ್ಸವ ದಿನದಂದು ಖಾಸಗಿ ಉದ್ಯಮ ಸಂಸ್ಥೆ ಕೈಗಾರಿಕಾ ಘಟಕಗಳಿಗೂ ರಜೆ ಘೋಷಿಸಲು ಕಾರ್ಮಿಕ ಇಲಾಖೆಗೆ ಸೂಚಿಸಬೇಕು. ಮಹಿಳಾ ಸಂಘಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು. ಸರ್ಕಾರಿ ಶಾಲಾ- ಕಾಲೇಜುಗಳಿಗೆ ಕಾರ್ಯಕ್ರಮ ಪ್ರಸ್ತುತ ಪಡಿಸಲು ಹೆಚ್ಚಿನ ಅವಕಾಶ ಕಲ್ಪಿಸಬೇಕು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಬೇಕು. ಶಿಷ್ಟಾಚಾರ ಅನುಸಾರ ಕಾರ್ಯಕ್ರಮ ಆಯೋಜಿಸಲು ಸುತ್ತೋಲೆ ಹೊರಡಿಸುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮ ಕುರಿತು ಮುಖಂಡರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧೆ ಹಾಗೂ ಪೂರ್ವ ಸಿದ್ಧತೆಗಳೊಂದಿಗೆ ಏರ್ಪಡಿಸಲು ಸೂಚನೆ ನೀಡಲಾಗುವುದು. ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಶಿಷ್ಟಾಚಾರ ಪಾಲಿಸುವ ಸಂಬಂಧ ನಿರ್ದೇಶನ ನೀಡಲಾಗುವುದು. ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳು, ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ಇತರ ಕಚೇರಿಗಳಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲು ಸೂಚಿಸಲಾಗುವುದು ಎಂದರು.

ಗಣರಾಜ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುವುದು. ಎಲ್ಲರ ಸಹಕಾರದಿಂದ ಗಣರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಖೆಯ ಸಹಾಯಕ ನಿರ್ದೆಶಕ ಗುರುಲಿಂಗಯ್ಯ, ಸಂಘಟನೆಗಳ ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಸಿ.ಎಂ.ಕೃಷ್ಣಮೂರ್ತಿ, ಸುರೇಶ್ ನಾಯಕ, ಕೆ.ಎಂ.ನಾಗರಾಜು, ಸಿ.ಎಂ.ನರಸಿಂಹಮೂರ್ತಿ, ನಿಜಧ್ವನಿ ಗೋವಿಂದರಾಜು, ಗು. ಪುರುಷೋತ್ತಮ್, ಚಾ.ಗು. ನಾಗರಾಜು, ಶಿವಣ್ಣ, ಎಲ್. ಸುರೇಶ್, ಕಂದಳ್ಳಿ ನಾರಾಯಣ, ಮಹೇಶ್ ಗೌಡ, ಶಿವಣ್ಣ (ಮಾಸ್ಟರ್), ಕದಂಬ ಅಂಬರೀಶ್ ಮತ್ತು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net