

ಚಾಮರಾಜನಗರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಆಕ್ರೋಶ ವ್ಯಕ್ತವಾಯಿತು.
ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಸಿಎಂ ಆಗಮನದ ನಿರೀಕ್ಷೆಯಲ್ಲಿರುವ ಎಲ್ಲರೂ ಇದ್ದಾರೆ. ಈ ಮಧ್ಯೆ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅಭಿಮಾನಿಗಳು ವೇದಿಕೆಯಲ್ಲಿ ಯಡಿಯೂರಪ್ಪ ಫೋಟೊ ಹಾಕಿಲ್ಲ ಎಂದು ಜೋರಾಗಿ ಕೂಗಾಡಿದರು.
ಬಿಎಸ್ವೈ ಮತ್ತು ನಿರಂಜನ್ ಭಾವಚಿತ್ರ ಇರುವ ಫೋಟೋ ತೋರಿಸಿ ಯಡಿಯೂರಪ್ಪ ಭಾವಚಿತ್ರ ಯಾಕೆ ಹಾಕಿಲ್ಲ? ಅಂತ ಪ್ರಶ್ನಿಸಿದರು. ಬಿಜೆಪಿ ಮುಖಂಡರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸಫಲರಾಗಲಿಲ್ಲ. ಬಳಿಕ ವೇದಿಕೆ ಹತ್ತಿದ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಇದು ಸರ್ಕಾರಿ ಕಾರ್ಯಕ್ರಮ. ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮ ನಡೆಯುತ್ತಿದೆ. ಇದು ಬಿಜೆಪಿ ಪಕ್ಷದ ಕಾರ್ಯಕ್ರಮವಲ್ಲ ಎಂದು ತಿಳಿಸಿದ ಬಳಿಕ ಕಾರ್ಯಕರ್ತರು ಸಮಾಧಾನಗೊಂಡರು.