

ಮೈಸೂರು: ನಗರದ ಪ್ರತಿಷ್ಠಿತ ಹಾಗೂ ವಿದ್ಯಾವಂತರ ಸಂಖ್ಯೆ ಹೆಚ್ಚಿರುವ ಚಾಮರಾಜ ಕ್ಷೇತ್ರವನ್ನು ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಿಕೆಟ್ ಹಂಚಿಕೆ ವಿಷಯದಲ್ಲಿ ಉಂಟಾಗಿದ್ದ ಬಂಡಾಯದ ಬಿಸಿಯ ನಡುವೆಯೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್‌ಗೌಡ ಜಯ ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿ, ಶಾಸಕ ಎಲ್.ನಾಗೇಂದ್ರ ಅವರನ್ನು 4,094 ಮತಗಳ ಅಂತರದಲ್ಲಿ ಸೋಲಿಸಿರುವ ಕೆ.ಹರೀಶ್‌ಗೌಡ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಿದ್ದಾರೆ. ಕಳೆದ ಬಾರಿಯ ಸೋಲಿಗೆ ಈ ಸಲ ಮುಯ್ಯಿ ತೀರಿಸಿಕೊಂಡಿರುವ ಅವರು, ಎಲ್.ನಾಗೇಂದ್ರ ಅವರನ್ನು ಮನೆಗೆ ಕಳುಹಿಸಿದ್ದಾರೆ. 72,931 ಮತ ಪಡೆದಿರುವ ಹರೀಶ್‌ಗೌಡ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಪ್ರಾರಂಭದಲ್ಲೇ ಮುನ್ನಡೆ ಕಂಡ ಹರೀಶ್‌ಗೌಡ, ಮಧ್ಯೆ ಎರಡು ಸುತ್ತುಗಳ ಹೊರತಾಗಿ ಕೊನೆಯವರೆಗೂ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಅವರು ಕ್ಷೇತ್ರದ ಪ್ರಬಲ ಒಕ್ಕಲಿಗ ಮತ ಸೇರಿದಂತೆ ಮುಸ್ಲಿಂ ಮತ್ತು ದಲಿತರ ಮತಗಳನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ.
68,837 ಮತ ಗಳಿಸಲು ಮಾತ್ರ ಶಕ್ತರಾದ ಎಲ್.ನಾಗೇಂದ್ರ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅತಿಯಾದ ಆತ್ಮವಿಶ್ವಾಸ, ಆಡಳಿತ ವಿರೋಧಿ ಅಲೆ ಅವರಿಗೆ ಮುಳುವಾಗಿದ್ದು, ಪುನಾರಾಯ್ಕೆಯಲ್ಲಿ ವಿಫಲರಾಗಿದ್ದಾರೆ. ಕಳೆದ ಐದು ವರ್ಷಗಳು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಅವರನ್ನು ಕೈ ಹಿಡಿದಿಲ್ಲ. ಆದರೆ, ಕೆ.ಹರೀಶ್‌ಗೌಡರ ಮೇಲಿನ ಅನುಕಂಪ ಕ್ಷೇತ್ರದಲ್ಲಿ ಕೆಲಸ ಮಾಡಿದೆ.
ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಕೆಂಗೇಗೌಡರ ಪುತ್ರ ಎಚ್.ಕೆ.ರಮೇಶ್ ಕೇವಲ 4,549 ಮತ ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಜತೆಗೆ ಠೇವಣಿ ಕಳೆದುಕೊಂಡಿದ್ದಾರೆ.
ಬಿಎಸ್‌ಪಿಯ ಚಂದ್ರಶೇಖರ್ (363 ಮತ), ಆಮ್ ಆದ್ಮಿ ಪಕ್ಷದ ಮಾಲವಿಕಾ ಗುಬ್ಬಿವಾಣಿ (789), ಕರ್ನಾಟಕ ರಾಷ್ಟ್ರ ಸಮಿತಿಯ ಡಿ.ಪಿ.ಕೆ.ಪರಮೇಶ್ (287), ಕಂಟ್ರಿ ಸಿಟಿಜನ್ ಪಾರ್ಟಿಯ ಎಂ.ಪಂಚಲಿಂಗು (63), ಉತ್ತಮ ಪ್ರಜಾಕೀಯ ಪಾರ್ಟಿಯ ಪ್ರಭ ನಂದೀಶ್ (907), ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ ಜಿ.ಎಸ್.ಸೀಮಾ (80), ಪಕ್ಷೇತರರಾದ ಎಂ.ಮನೋಜ್ ಕುಮಾರ್ (145), ಆರ್.ಯೋಗಾನರಸಿಂಹ ಮೂರ್ತಿ(123), ಸಲೀಂ ಅಹ್ಮದ್ (91), ಸಿದ್ದರಾಜು (106), ಟಿ.ಎಸ್.ಸುರೇಶ್ (163) ಠೇವಣಿ ಕಳೆದುಕೊಂಡಿದ್ದಾರೆ.
1,181 ಮತದಾರರು ‘ನೋಟಾ’ ಚಲಾಯಿಸಿದ್ದಾರೆ. ಒಟ್ಟು 914 ಅಂಚೆ ಮತಗಳ ಪೈಕಿ ಬಿಜೆಪಿಗೆ 419 ಮತ ಹಾಗೂ ಕಾಂಗ್ರೆಸ್‌ಗೆ 412 ಮತ, ಜೆಡಿಎಸ್‌ಗೆ 61 ಮತ ಬಂದಿವೆ. ಅಂಚೆ ಮತದಾನದಲ್ಲೂ 6 ನೋಟಾಗೆ ಚಲಾವಣೆಯಾಗಿವೆ.
ಕೆ. ಹರೀಶ್‌ಗೌಡ ಕ್ಷೇತ್ರದಲ್ಲಿ ಸತತ 15 ವರ್ಷಗಳ ಕಾಲ ಹಾಕಿದ ಶ್ರಮಕ್ಕೆ ಶಾಸಕ ಸ್ಥಾನ ಸಿಕ್ಕಿದೆ. ಆರಂಭದಲ್ಲಿ ಜೆಡಿಎಸ್‌ನಲ್ಲಿದ್ದ ಹರೀಶ್‌ಗೌಡ, ಎಚ್.ಡಿ. ರೇವಣ್ಣ ಅವರ ಶಿಷ್ಯರಾಗಿದ್ದರು. 2013 ಹಾಗೂ 2018ರ ಚುನಾವಣೆಗಳಲ್ಲಿ ಚಾಮರಾಜ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2013ರಲ್ಲಿ ಜೆಡಿಎಸ್‌ನಿಂದ ಎಚ್.ಎಸ್. ಶಂಕರಲಿಂಗೇಗೌಡರಿಗೆ ಟಿಕೆಟ್ ನೀಡಿ, ಮುಂದಿನ ಚುನಾವಣೆಗೆ ಅವಕಾಶ ಕಲ್ಪಿಸುವುದಾಗಿ ಹರೀಶ್‌ಗೌಡರನ್ನು ದಳಪತಿಗಳು ಸಮಾಧಾನ ಮಾಡಿದ್ದರು. ಆದರೆ, 2018ರಲ್ಲೂ ಎಚ್.ಡಿ.ದೇವೇಗೌಡರ ಸಂಬಂಧಿ ಎಂಬ ಕಾರಣಕ್ಕೆ ಪ್ರೊ.ಕೆ.ಎಸ್. ರಂಗಪ್ಪ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು. ಇದರಿಂದ ಕೆರಳಿದ ಕೆ. ಹರೀಶ್‌ಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 21,282 ಮತ ಪಡೆದು ಗಮನ ಸೆಳೆದಿದ್ದರು.
ಬಳಿಕ ನಡೆದ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲೂ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರರಾಗಿ ಕಣಕ್ಕಿಳಿಸಿ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರು. ತದನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಹರೀಶ್‌ಗೌಡ ಅವರು, ತಮ್ಮದೇ ಕಾರ್ಯಕರ್ತರ ಪಡೆ ಹೊಂದಿದ್ದು, ಕ್ಷೇತ್ರದಲ್ಲಿ ನಿರಂತರವಾಗಿ ಓಡಾಟ ನಡೆಸಿದ್ದರು. ಇದೀಗ ಕ್ಷೇತ್ರದ ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ.