

ಮುಕ್ತ ಅಭಿವ್ಯಕ್ತಿ ಎಂಬುವುದು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಹೀಗಾಗಿ ಮುಕ್ತ ಅಭಿವ್ಯಕ್ತಿಗೆ ಉತ್ತೇಜನ ನೀಡುವುದು ಮತ್ತು ಸರ್ಕಾರದ ಸೂಚನೆಗಳ ಪಾಲನೆ ಜತೆಗೆ ಅದನ್ನು ಸಮತೋಲನಗೊಳಿಸುವುದು ಜಾಗತಿಕ ವೇದಿಕೆಯಾದ ಟ್ವಿಟರ್ಗೆ ಸವಾಲಿನ ಕೆಲಸ.
ಟ್ವಿಟರ್ ಸ್ಥಳೀಯ ಕಾನೂನನ್ನು ಮಾನ್ಯ ಮಾಡಬೇಕು. ಇದು ದೇಶದಿಂದ ದೇಶಕ್ಕೆ ಕೆಲವೊಮ್ಮೆ ದೇಶದೊಳಗೇ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಭಾರತದಲ್ಲಿ ದ್ವೇಷಕಾರುವ ಭಾಷಣದ ಪೋಸ್ಟ್ಗಳನ್ನು ನಿಯಂತ್ರಿಸಬೇಕು ಎಂಬ ನಿಯಮವಿದೆ. ಆಕ್ಷೇಪಾರ್ಹ ಕಂಟೆಂಟ್ಗಳನ್ನು 24 ತಾಸಿನಲ್ಲಿ ಜಾಲತಾಣದಿಂದ ತೆಗೆಯಬೇಕು ಎಂಬ ಕಠಿಣ ನಿಯಮ ಇದೆ. ಇಂಥದ್ದನ್ನು ಸಾಧಿಸುವುದು ಟ್ವಿಟರ್ಗೆ ಕಷ್ಟವಾಗಬಹುದು. ಭಾರತದ ಐಟಿ ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮದ ನೈತಿಕ ಸಂಹಿತೆಯನ್ನು ಟ್ವಿಟರ್ ಯಾವ ರೀತಿ ಸರಿದೂಗಿಸುತ್ತದೆ ಎಂಬುದು ಕುತೂಹಲಕಾರಿ ಎಂದು ಐಟಿ ಕಾನೂನಿನ ಪರಿಣತ ವಕೀಲರೊಬ್ಬರು ಹೇಳಿದ್ದಾರೆ. ಏಕೆಂದರೆ, ಕಳೆದ ವರ್ಷವೇ ಭಾರತದಲ್ಲಿ 1,100 ಕಂಟೆಂಟ್ಗಳನ್ನು ವಾಪಸು ಪಡೆಯುವಂತೆ ಟ್ವಿಟರ್ಗೆ ಸೂಚಿಸಲಾಗಿತ್ತು. ಟ್ವಿಟರ್ ವಿರುದ್ಧ ವ್ಯಾಪಕ ಪ್ರತಿಭಟನೆಯೂ ನಡೆದಿತ್ತು.
ಎಲನ್ ಮಸ್ಕ್ ಹೋಗುತ್ತಿರುವ ವೇಗ, ಆಡುತ್ತಿರುವ ಮಾತನ್ನು ನೋಡಿದರೆ, ಅವರು ಕಾನೂನು ಕಟ್ಟಳೆಗಳನ್ನು ಅಷ್ಟಾಗಿ ಅನುಸರಿಸಲಾರರು ಎಂದೆನಿಸುತ್ತದೆ. ಹೀಗೆನಾದರೂ ಆದರೆ, ಮುಂದಿನ ದಿನಗಳಲ್ಲಿ ಟ್ವಿಟರ್ನ ಕಾನೂನು ಸಂಘರ್ಷ ಹೆಚ್ಚಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ವಿಷಯದಲ್ಲಿ ಎಲನ್ ಮಸ್ಕ್ ಅಷ್ಟಾಗಿ ತಲೆಕಡೆಸಿಕೊಳ್ಳಲಾರರು. ಅವರಿಗೆ ಸವಾಲಾಗುವುದು ಐರೋಪ್ಯ ರಾಷ್ಟ್ರಗಳು. ಅಲ್ಲಿ ನಿಯಮ ಉಲ್ಲಂಘನೆಯಾದರೆ ಭಾರಿ ದಂಡಕ್ಕೆ ಟ್ವಿಟರ್ ಗುರಿಯಾಗಬೇಕಾಗುತ್ತದೆ. ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದೂ ಹೇಳಿದ್ದಾರೆ.
ಕಳೆದ ವಾರವಷ್ಟೆ ಐರೋಪ್ಯ ಒಕ್ಕೂಟವು ಡಿಜಿಟಲ್ ಸೇವಾ ಕಾಯ್ದೆಯನ್ನು ಪರಿಷ್ಕರಿಸಿದೆ. ಅಂತರ್ಜಾಲ ತಾಣಗಳು, ಸಾಮಾಜಿಕ ಮಾಧ್ಯಮ ಗಳನ್ನು ಹೆಚ್ಚು ಉತ್ತರದಾಯಿಯನ್ನಾಗಿ ಮಾಡಿದೆ. ದ್ವೇಷ ಭಾಷಣ ಮತ್ತು ತಪು್ಪ ಮಾಹಿತಿಯನ್ನು ಹತ್ತಿಕ್ಕಬೇಕು ಎಂದು ಕಠಿಣವಾಗಿ ಸೂಚಿಸಿದೆ. ಸಾಮಾಜಿಕ ಜಾಲತಾಣಗಳ ಕಾರ್ಯನಿರ್ವಹಣೆ ಪಾರದರ್ಶಕವಾಗಿರಬೇಕು ಎಂದು ಐರೋಪ್ಯ ಒಕ್ಕೂಟ ಅಪೇಕ್ಷಿಸಿದೆ.
ಸಮಸ್ಯೆಗಳನ್ನು ಬಗೆಹರಿಸಲು ಕೃತಕ ಬುದ್ಧಿಮತ್ತೆಯನ್ನು (ಎಐ) ಅವಲಂಬಿಸಿದರೆ ಅದು ದುಬಾರಿ ಆಗಬಹುದು. ಸಮಸ್ಯೆಗಳು ಜಟಿಲವೂ ಆಗಬಹುದು. ಏಕೆಂದರೆ, ಎಐಗೆ ತುಂಬಿರುವ ಬುದ್ಧಿಶಕ್ತಿ ಅಥವಾ ಕಾನೂನಿನ ಜ್ಞಾನ ಎಲ್ಲ ಪ್ರದೇಶಕ್ಕೂ ಒಂದೇ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಎಐ ಪರಿಹಾರ ಕೊಡುವುದಕ್ಕಿಂತ ಉಪದ್ರವವನ್ನು ಹೆಚ್ಚು ಮಾಡುತ್ತದೆ ಎಂದು ಕೆಲವು ಐಟಿ ತಜ್ಞರು ಹೇಳಿದ್ದಾರೆ.
ಟ್ವಿಟರ್ಗೆ ಭಾರತ 3ನೇ ಅತಿದೊಡ್ಡ ಮಾರ್ಕೆಟ್: ಟ್ವಿಟರ್ಗೆ ಭಾರತವು ಜಾಗತಿಕವಾಗಿ ಮೂರನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಮಾಹೆಯಾನ 2.36 ಕೋಟಿ ಸಕ್ರಿಯ ಟ್ವಿಟರ್ ಬಳಕೆದಾರರು ಭಾರತದಲ್ಲಿ ಇದ್ದಾರೆ. ಅಮೆರಿಕದಲ್ಲಿ 7.69 ಕೋಟಿ, ಜಪಾನ್ನಲ್ಲಿ 5.80 ಕೋಟಿ ಜನರು ಪ್ರತಿತಿಂಗಳ ಸಕ್ರಿಯ ಬಳಕೆದಾರರಾಗಿದ್ದಾರೆ.
ಇತರ ಮೂಲಗಳಿಂದ ಸಾಲ-
ಟ್ವಿಟರ್ ಡೀಲ್ನ ನೇರ ಪರಿಣಾಮ ಟೆಸ್ಲಾ ಮೇಲಾಗಿದ್ದು, ಅದರ ಮೌಲ್ಯ ಒಂದೇ ಸಲ 126 ಶತಕೋಟಿ ಡಾಲರ್ ಕುಸಿದಿದೆ. ಟ್ವಿಟರ್ ಡೀಲ್ನಲ್ಲಿ ಟೆಸ್ಲಾ ಎಲ್ಲೂ ಭಾಗಿ ಆಗಿಲ್ಲ. ಇದು ಸಂಪೂರ್ಣವಾಗಿ ಎಲಾನ್ ಮಸ್ಕ್ ಅವರ ವಹಿವಾಟು. ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಟ್ವಿಟರ್ ಖರೀದಿಸುವುದಕ್ಕಾಗಿ 44 ಶತಕೋಟಿ ಡಾಲರ್ ಅನ್ನು ಎಲ್ಲಿಂದ ಹೊಂದಿಸುತ್ತಾರೆ ಎಂಬ ಪ್ರಶ್ನೆ ಟೆಸ್ಲಾ ಹೂಡಿಕೆದಾರರನ್ನು ಕಾಡಿದೆ. ಈ ಬಗ್ಗೆ ಮಸ್ಕ್ ಸ್ಪಷ್ಟೀಕರಣ ನೀಡದೇ ಇರುವ ಕಾರಣ, ಗೊಂದಲ ಉಂಟಾಗಿದೆ. ಟೆಸ್ಲಾ ಕಂಪನಿಯ ಹಣವನ್ನೇ ಅವರು ಟ್ವಿಟರ್ ಡೀಲ್ಗೆ ಬಳಸಬಹುದೆಂಬ ಸಂದೇಹ ಉಂಟಾದ ಕಾರಣ ಟೆಸ್ಲಾದ ಮೌಲ್ಯ ಮಂಗಳವಾರ 126 ಶತಕೋಟಿ ಡಾಲರ್ ಕುಸಿದಿದೆ. ಟ್ವಿಟರ್ ಡೀಲ್ ಪೂರ್ಣಗೊಳಿಸುವುದಕ್ಕೆ ಎಲಾನ್ ಮಸ್ಕ್ ತನ್ನ ಪಾಲಿನ 21 ಶತಕೋಟಿ ಡಾಲರ್ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಬೇಕಾಗಬಹುದು. ಮಂಗಳವಾರ ಕುಸಿದಿರುವ ಟೆಸ್ಲಾ ಕಂಪನಿ ಮೌಲ್ಯ ಕೂಡ ಶೇಕಡ 12.2 ಆಗಿದ್ದು, ಡಾಲರ್ ಲೆಕ್ಕಾಚಾರದಲ್ಲಿ 21 ಶತಕೋಟಿ ಡಾಲರ್ ಆಗುತ್ತದೆ.
ಭವಿಷ್ಯ ಅನಿಶ್ಚಿತವೆಂದ ಅಗರ್ವಾಲ್: ಟ್ವಿಟರ್ ಮಾರಾಟ ಮಾಡುವ ತೀರ್ವನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಕಂಪನಿಯ ಸಿಇಒ ಪರಾಗ್ ಅಗರ್ವಾಲ್, ‘ಕಂಪನಿಯ ಭವಿಷ್ಯ ಅನಿಶ್ಚಿತವಾಗಿದೆ’ ಎಂದಿದ್ದಾರೆ. ಮಂಗಳವಾರ ಸಂಸ್ಥೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಮಾತುಕತೆ, ಪ್ರಶ್ನೋತ್ತರಗಳಿಗಾಗಿ ಮಸ್ಕ್ ಶೀಘ್ರವೇ ಸಿಬ್ಬಂದಿ ಎದುರು ಬರಲಿದ್ದಾರೆ ಎಂದೂ ಪರಾಗ್ ಹೇಳಿದರು.