ಮೋದಿ ಜನಪ್ರಿಯತೆ ಮತಗಳಾಗಿ ಪರಿವರ್ತನೆ ಸವಾಲು; ಬಿ.ವೈ.ವಿಜಯೇಂದ್ರ ಅಭಿಮತ

IMG-20240331-WA0024
Published on

ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಉತ್ತುಂಗದಲ್ಲಿದೆ. ಅವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಸವಾಲನ್ನು ನಮ್ಮ ಮುಂದಿದೆ. ಪಕ್ಷದ ಕಾರ್ಯಕರ್ತರು ಈ ಸವಾಲನ್ನು ಸ್ವೀಕರಿಸಿ ಅದರಲ್ಲಿ ಯಶ ಕಾಣಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ರಾಜ್ಯ ಚುನಾವಣಾ ವಿಭಾಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಘಟಕವು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕೇಸು ದಾಖಲಿಸುವುದು ಒಂದು ಸಹಜ ಪ್ರಕ್ರಿಯೆ. ನಮ್ಮ ಎದುರಾಳಿಗಳನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಆಗಲೇಬೇಕು. ಇಲ್ಲವಾದರೆ, ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ ಎಂದರು.

ಹತಾಶ ಕಾಂಗ್ರೆಸ್

ರಾಜ್ಯದ ಕಾಂಗ್ರೆಸ್ ಸರಕಾರಾಆ ಹತಾಶ ಸ್ಥಿತಿಯಲ್ಲಿದೆ. ಕೇವಲ 9 ತಿಂಗಳ ಹಿಂದೆ ಅಧಿಕಾರ ಪಡೆದ ಈ ಕಾಂಗ್ರೆಸ್ ಸರಕಾರವು ಯಾವುದೋ ಒಂದು ಭ್ರಮೆಯಲ್ಲಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿದ ಅಭೂತಪೂರ್ವ ಬೆಂಬಲದಿಂದ ಅಧಿಕಾರದ ಅಮಲಿನಲ್ಲಿ ಅದು ತೇಲುತ್ತಿತ್ತು ಎಂದು ಛೇಡಿಸಿದರು.

 ಕಾಂಗ್ರೆಸ್ಸಿಗರಿಗೆ ಇವತ್ತು ಕ್ರಮೇಣವಾಗಿ ಜ್ಞಾನೋದಯ ಆಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸತ್ಯಸಂಗತಿಗಳು ಮನವರಿಕೆ ಆಗುತ್ತಿವೆ ಎಂದು ವಿಶ್ಲೇಷಿಸಿದರು.

ಅತಿ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ತಯಾರಿಗಾಗಿ 10-15 ಜನ ಸಚಿವರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ, ಯಾವನೇ ಒಬ್ಬ ಸಚಿವರು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಗಲು ತಯಾರಾಗಲಿಲ್ಲ.

ಮೋದಿಯವರ ಜನಪ್ರಿಯತೆ ಕಾರಣಕ್ಕಾಗಿ ತಾವು ಚುನಾವಣೆಯಲ್ಲಿ ಗೆಲ್ಲದೇ ಹೋದರೆ ಹಾಗೂ ಜನರಿಂದ ತಿರಸ್ಕøತ ಆದರೆ ಎಂಬ ಭಯದಿಂದ ಯಾವುದೇ ಸಚಿವರು ಚುನಾವಣೆಯಲ್ಲಿ ನಿಲ್ಲಲು ತಯಾರಾಗಲಿಲ್ಲ ಎಂದು ಕುಟುಕಿದರು.

ಸುಳ್ಳು ಪ್ರಚಾರದಿಂದ ಪ್ರಯೋಜನ ಸಿಗಲಾರದು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಜ್ಞಾನೋದಯ ಆಗಿದೆ. ಕೇವಲ 9 ತಿಂಗಳಲ್ಲಿ ಕೆಟ್ಟ ಸರಕಾರ ಎಂಬ ಹೆಸರನ್ನು ಕಾಂಗ್ರೆಸ್ ಸರಕಾರ ಪಡೆದುಕೊಂಡಿದೆ. ಜನರು ಹತಾಶರಾಗಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರದ ಜನಪ್ರಿಯತೆಯನ್ನು ನಾವು ಬಳಸಿಕೊಳ್ಳಬೇಕು ಎಂದ ಅವರು, ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ಹಡಗಿನಂತಿದೆ ಎಂದು ವಿಜಯೇಂದ್ರ ಟೀಕಿಸಿದರು.

25 ಕೇಸ್ ಗಳು ದಾಖಲು

ಈ ಸಂದರ್ಭದಲ್ಲಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಅವರು ಮಾತನಾಡಿ, ಕಳೆದ 12 ದಿನಗಳಲ್ಲಿ ಸುಮಾರು 25 ದೂರುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಪ್ರಧಾನಿಯವರ ವಿರುದ್ಧ ಮಾತನಾಡಿದ ಶಿವರಾಜ ತಂಗಡಗಿ ವಿರುದ್ಧ ಕಾರಟಗಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ವಿವರಿಸಿದರು. ಕೇಂದ್ರ ಗೃಹ ಸಚಿವರ ವಿರುದ್ಧ ಆಕ್ಷೇಪಾರ್ಹ ಮಾತನಾಡಿದ ಮುಖ್ಯಮಂತ್ರಿಗಳ ಮಗ ಯತೀಂದ್ರ ಸಿದ್ದರಾಮಯ್ಯರ ವಿರುದ್ಧ ದೂರು ಕೊಡಲಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಕಾರಣಕ್ಕೆ ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ಸಿಗರು ಇದ್ದರು. ಈಗ 28 ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ನಿಗದಿತ ಕ್ಷೇತ್ರವನ್ನು ಗೆಲ್ಲುವ ಭರವಸೆಯೂ ಕಾಂಗ್ರೆಸ್ಸಿಗರಿಗೆ ಇಲ್ಲ. ಬಿಜೆಪಿ- ಜೆಡಿಎಸ್ ಪರವಾಗಿ ಎಲ್ಲ 28 ಕ್ಷೇತ್ರಗಳಲ್ಲೂ ಜನಾಶೀರ್ವಾದ ಲಭಿಸುವುದು ಖಚಿತ ಎಂದು ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಪ್ರಕೋಷ್ಠಗಳ ಸಂಚಾಲಕ ದತ್ತಾತ್ರಿ ಅವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕ ಅನಿಲ್‍ಕುಮಾರ್, ಲಕ್ಷ್ಮಣ್, ಚುನಾವಣಾ ವಿಭಾಗದ ರಾಜ್ಯ ಪ್ರಮುಖ ದತ್ತಗುರು ಹೆಗಡೆ, ವಿನೋದ್‍ಕುಮಾರ್, ರಾಜಶೇಖರ್, ಹರ್ಷ ಮುತಾಲಿಕ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net