ಕೋಲಾರಕ್ಕೆ ಬರ್ತಿದೆ ಚಳ್ಳಕೆರೆ ಟೊಮ್ಯಾಟೊ! ತರಕಾರಿ ಬೆಲೆ ಕುಸಿತ

challakere tomato
1-ಕೋಲಾರ-1 ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಸರಬರಾಜಾಗಿರುವ ಟೊಮ್ಯಾಟೊ.
Published on

ಕೋಲಾರ: ಕೋಲಾರ ಮಾರುಕಟ್ಟೆಗೆ ಹೊರರಾಜ್ಯಗಳಿಗೆ ಕಳಿಸುವಷ್ಟು ಟೊಮ್ಯಾಟೊ ಸರಬರಾಜಾಗುತ್ತಿಲ್ಲ. ಸೀಸನ್​ ಮುಗಿಯುತ್ತಿದ್ದಂತೆ ಬೆಲೆ ಕುಸಿತ ಕಂಡಿದ್ದು, ಆಂಧ್ರದ ಮಲಕಲಚೆರುವು, ರಾಜ್ಯದ ಚಳ್ಳಕೆರೆಯಿಂದ ತರಿಸಿಕೊಂಡು, ಹರಿಯಾಣ, ಉತ್ತರಪ್ರದೇಶ, ಒಡಿಶಾ, ನವದೆಹಲಿ, ಛತ್ತೀಸ್​ಘಡ, ಪಶ್ಚಿಮ ಬಂಗಾಳ, ರಾಜಾಸ್ಥಾನ, ತಮಿಳುನಾಡು ಮತ್ತಿತರ ಕಡೆ ಕಳುಹಿಸಲಾಗುತ್ತಿದೆ.

ಸೆಪ್ಟೆಂಬರ್​ನಲ್ಲಿ ಕೆಜಿ ಟೊಮ್ಯಾಟೊ ಗರಿಷ್ಠ 40 ರೂ. ತನಕ ಮಾರಾಟವಾಗಿತ್ತು. ಪ್ರಸ್ತುತ ಕೆಜಿಗೆ 13ರೂ. ಗೆ ಇಳಿದಿದೆ. ಬೆಳೆಗಾರರ ಸಂಖ್ಯೆ ಕಡಿಮೆಯಿದ್ದು, ಬೆಲೆ ಕುಸಿತಕ್ಕೆ ಜಿಲ್ಲೆ ರೈತರು ಅಷ್ಟೇನೂ ನಷ್ಟ ಹೊಂದದಿದ್ದರೂ, ಇದರ ಜತೆ ಬೀನ್ಸ್​, ಕ್ಯಾಪ್ಸಿಕಂ, ಕ್ಯಾರೆಟ್​ ಮತ್ತಿತರ ತರಕಾರಿ ಹೊರರಾಜ್ಯಗಳಿಗೆ ಸರಬರಾಜಾಗದಿರುವುದರಿಂದ ಅವುಗಳ ಬೆಲೆ ಪಾತಾಳಕ್ಕಿಳಿದಿದೆ. ಇದು ಕೃಷಿಕರು ಮತ್ತೊಂದು ರೀತಿಯಲ್ಲಿ ನಷ್ಟ ಅನುಭವಿಸುವಂತೆ ಮಾಡಿದೆ.

ಪ್ರತಿವರ್ಷ ಸೆಪ್ಟೆಂಬರ್​, ಅಕ್ಟೋಬರ್​, ನವೆಂಬರ್​ ಟೊಮ್ಯಾಟೊ ಸೀಸನ್​ ಆಗಿರುತ್ತದೆ. ಈ ಅವಧಿಯಲ್ಲಿ ಮಾರುಕಟ್ಟೆಗೆ ನಿತ್ಯ 30ರಿಂದ 40ಸಾವಿರ ಕ್ವಿಂಟಾಲ್​ ಟೊಮ್ಯಾಟೊ ಸರಬರಾಜಾಗುತ್ತದೆ. ಆದರೀಗ 9 ಸಾವಿರ ಕ್ವಿಂಟಾಲ್​ ಉತ್ಪನ್ನ ಸರಬರಾಜಾಗುತ್ತಿದೆ. ಇದು ಸೀಸನ್​ನಲ್ಲಿ ಸರಬರಾಜಾಗುವುದಕ್ಕೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟು ಮಾತ್ರವಾಗಿದೆ. ಅದರಲ್ಲೂ ಜಿಲ್ಲೆಯ ರೈತರು ಮೂರ್ನಾಲ್ಕು ಸಾವಿರ ಕ್ವಿಂಟಾಲ್​ ಟೊಮ್ಯಾಟೊ ಮಾತ್ರ ಅಂದರೆ ಶೇ.50ರಷ್ಟು ಉತ್ಪನ್ನ ಮಾತ್ರ ತರುತ್ತಿದ್ದಾರೆ. ಅದೂ ಸಹ ಬಹುತೇಕ ಕಳಪೆ ಉತ್ಪನ್ನವಾಗಿರುವುದರಿಂದ ಹೊರರಾಜ್ಯಗಳ ವ್ಯಾಪಾರಿಗಳ ಜತೆ ಒಪ್ಪಂದ ಮಾಡಿಕೊಂಡಿರುವುದರಿಂದ ಬೇರೆ ಕಡೆಯಿಂದ ತರಿಸಿಕೊಂಡು ಬಾಕ್ಸ್​ಗಳನ್ನು ಬದಲಿಸಿ ಹೊರರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದೇವೆ ಎಂದು ಮಂಡಿ ಮಾಲೀಕರು ಹೇಳುತ್ತಿದ್ದಾರೆ.

ಉತ್ಪನ್ನ, ಗುಣಮಟ್ಟ ಕುಸಿತ: ಜಿಲ್ಲೆಯಲ್ಲಿ 3 ತಿಂಗಳಿಂದ ಶೀತ ವಾತಾವರಣ ಇದೆ. ಮಚ್ಚೆ ಮತ್ತಿತರ ರೋಗಗಳು ಟೊಮ್ಯಾಟೊ ಬೆಳೆಗೆ ತಗಲಿದೆ. ಇದರ ಜತೆಗೆ ಊಜಿ ಹಾವಳಿ ಅಧಿಕವಾಗಿದ್ದರಿಂದ ಗುಣಮಟ್ಟದ ಹಣ್ಣುಗಳು ಸಿಗುತ್ತಿಲ್ಲ. ಹೀಗಾಗಿಯೇ ಇಳುವರಿ ಸಹ ಕುಸಿದಿದೆ. ಸೀಸನ್​ ಮುಗಿದಿರುವುದರಿಂದ ವ್ಯಾಪಾರಸ್ಥರು ಅವರ ರಾಜ್ಯಗಳಿಗೆ ವಾಪಸ್​ ಹೋಗಿದ್ದಾರೆ. ಇದೆಲ್ಲದರ ಪರಿಣಾಮ ಉತ್ಪನ್ನ ಕೇಳುವವರಿಲ್ಲದಂತಾಗಿದೆ.

ತರಕಾರಿ ಬೆಲೆ ಪಾತಾಳಕ್ಕೆ: ಜಿಲ್ಲೆಯಲ್ಲಿ ಬಹುತೇಕ ರೈತರು ಟೊಮ್ಯಾಟೊ ಸೀಸನ್​ ಅಂತ್ಯವಾಗುತ್ತಿದ್ದಂತೆ ತೋಟ ಉಳುಮೆ ಸಹ ಮಾಡದೆ ಬಳ್ಳಿ ಬೀನ್ಸ್​(ಹುರಳಿಕಾಯಿ) ನಾಟಿ ಮಾಡಿದ್ದಾರೆ. ಅಕ್ಟೋಬರ್​ನಲ್ಲಿ ಕೆಜಿಗೆ 75ರೂ.ಇದ್ದುದು ಪ್ರಸ್ತುತ 15ರೂ.ಗೆ ಇಳಿದಿದೆ. ಬಜ್ಜಿ ಮೆಣಸಿನ ಕಾಯಿ 20ರೂ.,ಕ್ಯಾರೆಟ್​ 26ರೂ., ಹಸಿಮೆಣಸಿನಕಾಯಿ 25ರೂ., ಎಲೆಕೋಸು 3ರೂ., ಹೀರೇಕಾಯಿ 20ರೂ., ಮೂಲಂಗಿ 6ರೂ., ಹೂಕೋಸು 12ರೂ., ಬದನೆ 4ರೂ., ನವಿಲುಕೋಸು 6ರೂ.ಗೆ ಇಳಿದಿದೆ.

ಶುಷ್ಕ ವಾತಾವರಣ ಇದ್ದರಷ್ಟೇ ಗುಣಮಟ್ಟದ ಟೊಮ್ಯಾಟೊ ಪಡೆಯಲು ಸಾಧ್ಯವೆಂಬುದು ತಜ್ಞರ ಅಭಿಪ್ರಾಯವಾಗಿದೆ. ನವೆಂಬರ್​ ಪ್ರಾರಂಭದಿಂದ ಎಲ್ಲ ತರಕಾರಿಗಳ ಬೆಲೆ ಕುಸಿಯುತ್ತ ಬಂದಿದ್ದು, ಮುಂದಿನ ತಿಂಗಳು ಧನುಮಾರ್ಸದಲ್ಲಿ ಮದುವೆ, ಶುಭಕಾರ್ಯಗಳು ಸ್ಥಗಿತವಾಗುವುದರಿಂದ ತರಕಾರಿ ಬೆಲೆ ಮತ್ತಷ್ಟು ಕುಸಿತವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಎನ್​.ವಿಜಯಲಲಕ್ಷ್ಮಿ, ಕಾರ್ಯದರ್ಶಿ, ಎಪಿಎಂಸಿ, ಕೋಲಾರ. ಚಳ್ಳಕೆರೆ ಭಾಗದಲ್ಲಿ ವರ್ಷಕ್ಕೊಮ್ಮೆ ರೈತರು ಟೊಮ್ಯಾಟೊ ಬೆಳೆಯುತ್ತಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಮೂರು ಸೀಸನ್​ನಲ್ಲೂ ಟೊಮ್ಯಾಟೊ ಹಾಕುತ್ತಾರೆ. ಇದು ಗುಣಮಟ್ಟ ಕುಸಿತಕ್ಕೆ ಕಾರಣವಾಗಿದೆ. ನಮ್ಮ ರೈತರು ಹೆಚ್ಚಾಗಿ ಕೀಟನಾಶಕ, ರಾಸಾಯನಿಕ ಗೊಬ್ಬರ ಹಾಕುವುದು ಗುಣಮಟ್ಟ ಕುಸಿತಕ್ಕೆ ಕಾರಣವಾಗಿದೆ. ಕೆ.ಎನ್​.ನಟರಾಜಗೌಡ, ರೈತ ಕಲ್ವಮಂಜಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net