

ಚಳ್ಳಕೆರೆ: ರಾಜಕೀಯ ಕಾರಣಕ್ಕೋ,ಆಡಳಿತ ವ್ಯವಸ್ಥೆಯ ನಿರ್ವಹಣೆ ಕಾರಣಕ್ಕೋ ಗೊತ್ತಿಲ್ಲ! ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ-ತಹಸೀಲ್ದಾರ್ ಎನ್.ರಘುಮೂರ್ತಿ ನಡುವೆ ತಾಲೂಕು ಪಂಚಾಯಿತಿ ಸಭೆಯಲ್ಲಿ ಗುರುವಾರ ಮಾತಿನ ಯುದ್ಧವೇ ನಡೆದು ಹೋಯಿತು.
ವಾರೊಪ್ಪತ್ತಿನ ಹಿಂದೆ ಇಬ್ಬರ ನಡುವೆ ಹೊತ್ತಿಕೊಂಡಿದ್ದ ಕಿಡಿ ಇಂದು ಎರಡನೇ ಭಾರಿ ಸ್ಫೋಟಿಸಲು ತಾಪಂ ಕೆಡಿಪಿ ಸಭೆ ವೇದಿಕೆ ಒದಗಿಸಿತು. ಇಬ್ಬರ ನಡುವಿನ ವಾಗ್ಯುದ್ಧ ಆಡಳಿತ-ಪ್ರತಿಪಕ್ಷ ಸದಸ್ಯರ ವಾದ ವಿವಾದ ನೆನೆಪಿಸಿತು.
ರಾಜಕೀಯ ಆಕಾಂಕ್ಷೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ ಎಂಬ ಶಾಸಕರ ಆರೋಪ ನಿರಾಕರಿಸಿದ ತಹಸೀಲ್ದಾರ್ ಸಾಬೀತುಪಡಿಸಿ ಎಂದು ಮೇಜುಕುಟ್ಟಿ ಸಭೆಯಿಂದ ಹೊರ ನಡೆದರು. ಹೊರಡುವ ಮುನ್ನ, ನಾನಂತೂ ನನ್ನ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದಕ್ಕೂ ಮೀರಿ ದೂರು ನೀಡುವುದಾದರೆ ಯಾವನಿಗಾದರೂ ಕೊಡಿ ಎಂದು ತಹಸೀಲ್ದಾರ್ ಹೇಳಿದ್ದು ಶಾಸಕರನ್ನು ಕೆರಳಿಸಿತು.
ತಹಸೀಲ್ದಾರ್ ವರ್ತನೆ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿಗೆ ಕರೆ ಮಾಡಿದರಾದರೂ ಅವರ ಆಪ್ತಸಹಾಯಕ ಕರೆ ಸ್ವೀಕರಿಸಿದ್ದರಿಂದ ಸಭೆ ಮುಂದುವರಿಸಿ ಬಳಿಕ ಡಿಸಿ ಭೇಟಿ ಮಾಡುವುದಾಗಿ ತಿಳಿಸಿದರು.
ವಿವರ: ಸ್ಮಶಾನ ಭೂಮಿ-ಆಶ್ರಯ ನಿವೇಶನಗಳ ಹಕ್ಕುಪತ್ರ ವಿತರಣೆ ಸಮಸ್ಯೆ ಬಗೆಹರಿಸುವ ವಿಚಾರ ಚರ್ಚೆಯಾಗಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಮತ್ತು ತಹಸೀಲ್ದಾರ್ ಎನ್.ರಘುಮೂರ್ತಿ ನಡುವಿನ ರಾಜಕೀಯ ಮುಸುಕಿನ ಗುದ್ದಾಟ ಬಹಿರಂಗಕ್ಕೆ ವೇದಿಕೆ ಆಯ್ತು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಮತ್ತು ತಹಸೀಲ್ದಾರ್ ನಡುವಿನ ಮಾತಿನ ಚಕಮಕಿ ತಾರಕ್ಕಕ್ಕೇರಿತು. ಈ ಸಂದರ್ಭ ಸಿಟ್ಟಿಗೆದ್ದ ತಹಸೀಲ್ದಾರ್, ಆಧಾರ ರಹಿತ ದೂರುಗಳ ಪರ ವಹಿಸಿಕೊಂಡು ಪದೇ ಪದೆ ನನ್ನನ್ನೇ ಗುರಿ ಮಾಡಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದು ಸಭೆಯಿಂದ ಹೊರ ನಡೆದರು.
ಶಾಸಕರ ನೇತೃತ್ವದಲ್ಲಿ ಆಯೋಜಿಸಿದ್ದ ತಾಪಂ ಪ್ರಗತಿ ಪರಿಶೀಲನೆ ಸಭೆಯಲ್ಲಿ 2೦ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸ್ಮಶಾನ ಭೂಮಿ ಮತ್ತು ಆಶ್ರಯ ನಿವೇಶನದ ಹಕ್ಕುಪತ್ರ ವಿತರಣೆಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿತ್ತು.
ಈ ವೇಳೆ ಪಾವಗಡ ರಸ್ತೆಯಲ್ಲಿನ ಉಪ್ಪಾರಹಟ್ಟಿಯ ಗೋಮಾಳ ಭೂಮಿಯಲ್ಲಿ ಯಾದವ ಸಮುದಾಯದ ನಿವೇಶನಕ್ಕೆ 5 ಎಕರೆ ಜಮೀನು ಕೇಳಲಾಗಿತ್ತು. ಮಂಜೂರು ಕೋರಿ ತಾಪಂನಿಂದ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿದೆ ಎನ್ನುವ ವಿಷಯ ಪ್ರಸ್ತಾಪಕ್ಕೆ ಬಂದಿತು.
ಆಗ ಮಾತನಾಡಿದ ಶಾಸಕರು, ಜಮೀನು ಮಂಜೂರಿಗೆ ನೇರವಾಗಿ ತಾಪಂನಿಂದ ಜಿಪಂಗೆ ಏಕೆ ಕಳುಹಿಸಲಾಯಿತು? ಎಂದು ಇಒ ಬಿ.ಕೆ.ಹೊನ್ನಯ್ಯ ಅವರನ್ನು ಪ್ರಶ್ನಿಸಿದಾಗ ಜಮೀನು ಆರ್ ಡಿಪಿಆರ್ ವ್ಯಾಪ್ತಿಯಲ್ಲಿದ್ದ ಕಾರಣ ಜಿಪಂಗೆ ಕಳುಹಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಇಒ ಮಾತನ್ನು ಉಲ್ಲೇಖಿಸಿ ಮಾತನಾಡಿದ ಶಾಸಕರು, ರೀ ತಹಸೀಲ್ದಾರ್ ಆರ್‌ಡಿಪಿಆರ್‌ಗೆ ಒಳಪಟ್ಟ ಜಮೀನು ಆಗಿರುವ ಕಾರಣ ಜಿಪಂಗೆ ಕಳುಹಿಸಲಾಗಿದೆ. ಆದರೆ ಯಾದವ ಸಮುದಾಯಕ್ಕೆ ಜಮೀನು ತಪ್ಪಿಸಲು ಶಾಸಕರು ಜಿಲ್ಲಾಡಳಿತದ ಬದಲು ಜಿಪಂಗೆ ಕಳುಹಿಸಿದ್ದಾರೆ ಎಂದು ಗೊಲ್ಲರಹಟ್ಟಿಗಳಲ್ಲಿ ನನ್ನ ಮೇಲೆ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ನೀವಿದ್ದೀರಿ ಎಂದು ತಹಸೀಲ್ದಾರ್ ವಿರುದ್ಧ ಗರಂ ಆದರು.
ಪ್ರತಿಕ್ರಿಯಿಸಿದ ತಹಸೀಲ್ದಾರ್, ಸಾರ್ವಜನಿಕವಾಗಿ ಜನರು ನೂರಾರು ಮಾತು ಆಡುತ್ತಾರೆ. ಆಧಾರರಹಿತ ಆರೋಪಗಳಿಗೆ ನನ್ನನ್ನು ಗುರಿ ಮಾಡಬೇಡಿ. ನನ್ನ ವಿರುದ್ಧ ಯಾರಾದರೂ ದೂರು ನೀಡಿದ್ದರೆ ಸಾಬೀತು ಮಾಡಿ. ಪೂರ್ವಾಗ್ರಹಪೀಡಿತರಾಗಿ ಮಾತನಾಡಬೇಡಿ. ನಿಮ್ಮ ನಿರ್ದೇಶನದಂತೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಜನಸೇವೆ ಮಾಡುವುದೂ ಕಷ್ಟವಾಗಿದೆ ಎಂದು ಮೇಜು ಗುದ್ದಿ ಮಾತನಾಡಿದರು.
ಸಿಟ್ಟಿಗೆದ್ದ ಶಾಸಕರು, ಎಂಟು ತಿಂಗಳಿನಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ. ತಹಸೀಲ್ದಾರ್ ಆಗಿ ಕರ್ತವ್ಯ ಮಾಡದೆ ಕೆಲ ರಾಜಕಾರಣಿಗಳನ್ನು ಸಂಪರ್ಕದಲ್ಲಿಟ್ಟುಕೊಂಡಿದ್ದೀರಿ.ರಾತ್ರಿ ಹೊತ್ತಲ್ಲಿ ಮತ್ತು ಕರ್ತವ್ಯ ಅಲ್ಲದ ಸಮಯದಲ್ಲಿ ಸರ್ಕಾರಿ ವಾಹನ ಬಳಸುತ್ತೀರಿ ಏಕೆ? ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿವಾದಕ್ಕಿಳಿದ ತಹಸೀಲ್ದಾರ್, ರಾತ್ರಿ ಕೆಂಚವೀರನಹಳ್ಳಿ ಕಡೆ ವಾಹನ ಬಳಸಿದ್ದಕ್ಕೆ ಕಾರಣ ಇದೆ. ಅಕ್ರಮ ಮರಳು ಸಾಗಣೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಅಲ್ಲಿಗೆ ಹೋಗಿದ್ದೇನೆ. ಇದಕ್ಕೂ ಮೀರಿ ಆರೋಪ ಮಾಡೋದಾದ್ರೆ ಮಾಡಿ ಎಂದರು.
ಎಇಒ ಸಂತೋಷ್‌ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ಚುನಾವಣೆಗೆ ಸ್ಪರ್ಧೆಗೆ ಪುಷ್ಟಿ: ಜ.11ರಂದು ನಡೆದಿದ್ದ ಪ್ರಗತಿ ಪರಿಶೀಲನೆ ಸಭೆಯು ಶಾಸಕರ- ತಹಸೀಲ್ದಾರ್ ನಡುವಿನ ಮುಸುಕಿನ ಗುದ್ದಾಟಕ್ಕೆ ಬಲಿಯಾಗಿತ್ತು. ಗುರುವಾರದ ಸಭೆ ಕೂಡ ಇಬ್ಬರ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಬರುವ ಚುನಾವಣೆಯಲ್ಲಿ ತಹಸೀಲ್ದಾರ್ ರಾಜಕೀಯ ಪಕ್ಷದಿಂದ ಸ್ಪರ್ಧೆಗಿಳಿಯಲಿದ್ದಾರೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿರುವುದು ಕುತೂಹಲ ಮೂಡಿಸಿದೆ.