ಚೈತ್ರಾ ಕುಂದಾಪುರ ಸಾಂತ್ವನ ಕೇಂದ್ರಕ್ಕೆ ಶಿಫ್ಟ್​; ಉಳಿದ ಆರೋಪಿಗಳು?

Chaithra Kundapura (1)
Published on

ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂ. ಪಡೆದು ವಂಚಿಸಿದ್ದ ಆರೋಪದ ಮೇರೆಗೆ ಬಂಧಿತರಾಗಿರುವ ಚೈತ್ರಾ ಕುಂದಾಪುರ ಮತ್ತು ಇತರ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಿಸಿಬಿ ಪೊಲೀಸರು, ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ.

ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಚೇರಿಗೆ ಕರೆತಂದ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಸೇರಿದಂತೆ ಎಲ್ಲ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಚೈತ್ರಾಳನ್ನು ಪ್ರತ್ಯೇಕವಾಗಿ ಹಾಗೂ ಇನ್ನುಳಿದ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದರು.

ಎಲ್ಲ ಆರೋಪಿಗಳ ಮೊಬೈಲ್​ಫೋನ್ ವಶಕ್ಕೆ ಪಡೆದಿರುವ ಪೊಲೀಸರು, ಇಂಥ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದೆ ಎಂದು ಆರೋಪಿಗಳ ಕುಟುಂಬಸ್ಥರಿಗೆ ಸಂದೇಶವನ್ನು ಕಳುಹಿಸಿದ್ದಾರೆ. ವಿಚಾರಣೆ ಬಳಿಕ ಚೈತ್ರಾಳನ್ನು ಡೇರಿ ಸರ್ಕಲ್ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಪೊಲೀಸರು ಕರೆದೊಯ್ದಿದ್ದಾರೆ. ನಾಳೆ ಬೆಳಗ್ಗೆ ಮತ್ತೆ ಆಕೆಯವನ್ನು ವಿಚಾರಣೆಗೆ ಕರೆ ತರಲಿದ್ದು, ಉಳಿದ ಆರೋಪಿಗಳನ್ನು ಇಂದು ಸಿಸಿಬಿ ಕಚೇರಿಯಲ್ಲೇ ಉಳಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net