

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜವಾಬ್ದಾರಿ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ಬೆಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಸ್ಥಾಪನೆ ಮಾಡಿದರು. 40 ವರ್ಷಗಳ ನಂತರ ಈ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅವಕಾಶ ದೊರೆತಿದೆ ಎಂದರು.
ಆ ಅವಕಾಶ ಬಳಸಿಕೊಂಡು ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕ ಹಾಗೂ ರಾಜಕೀಯವಾಗಿ ಸರಿಯಾದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆ ಸ್ವಾಭಿಮಾನದಿಂದ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾಳೆ. ಇನ್ನು ಗೃಹಲಕ್ಷ್ಮಿ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆಯರು ಹಳ್ಳಿಯಲ್ಲಿ ಗ್ರಂಥಾಲಯ ಆರಂಭಿಸಿದರೆ, ಮತ್ತೆ ಕೆಲವು ಮಗನಿಗೆ ಬೈಕ್ ಕೊಡಿಸಿದ್ದಾರೆ. ಮತ್ತೆ ಕೆಲವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ, ಗಂಡನ ಶಸ್ತ್ರ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಕೆಲವು ಮಹಿಳೆಯರು ತಮ್ಮ ಮನೆಗೆ ಫ್ರಿಡ್ಜ್, ಟಿವಿ ಹಾಗೂ ಚಿನ್ನಾಭರಣ ಖರೀದಿ ಮಾಡುತ್ತಿದ್ದಾರೆ, ಯೋಜನೆ ಸದುಪಯೋಗವಾಗುತ್ತಿದೆ ಎಂದು ಹೇಳಿದರು.