ಬೆಂಗಳೂರಿನಲ್ಲಿ ಸರಗಳ್ಳರಿಗೆ ಈತನ ಮನೆಯೇ ಆಶ್ರಯ ತಾಣ!

Chain Snatchers
Published on

ಬೆಂಗಳೂರು: ಕಳ್ಳತನ ಮಾಡೋದು ಅಪರಾಧ, ಇನ್ನು ಆ ಕಳ್ಳರಿಗೆ ಗೊತ್ತಿದ್ದೂ ಆಶ್ರಯ ನೀಡೋದು ಅಕ್ಷಮ್ಯ ಅಪರಾಧ. ಆದರೆ ಇಲ್ಲೊಬ್ಬ ಭೂಪ, ಸರಗಳ್ಳರಿಗೆ ತನ್ನ ಮನೆಯಲ್ಲೇ ಆಶ್ರಯ ನೀಡಿ ಸಿಕ್ಕಿಬಿದ್ದಿದ್ದಾನೆ.

ಚಿನ್ನಾಭರಣ ಆಸೆಗಾಗಿ ಸರಗಳ್ಳರಿಗೆ ಆಶ್ರಯ ನೀಡುತ್ತಿದ್ದ ಚಾಮರಾಜಪೇಟೆಯ ರಾಘವೇಂದ್ರ ಬ್ಲಾಕ್​ ನಿವಾಸಿ, ರಾಜಸ್ತಾನ ಮೂಲದ ಜಗನ್​ ಲಾಲ್​ (22)ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿರಿ ಪೊಲೀಸರ ದಾಳಿ ವೇಳೆ ಆ ಪುರುಷರ ಕೈಯಲ್ಲಿದ್ದ ಲೇಡಿಸ್​ ಪರ್ಸ್​ನ ರಹಸ್ಯ ಬಯಲಾಯ್ತು!

ಜಗನ್​ ಲಾಲ್​ ಈ ಮೊದಲು ಗಾಂಧಿಬಜಾರ್​ನಲ್ಲಿ ಅಂಗಡಿ ಹೊಂದಿದ್ದ. ವ್ಯವಹಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಂಗಡಿ ಮುಚ್ಚಿ ಹೋಟೆಲ್​ನಲ್ಲಿ ಸಪ್ಲೆಯರ್​ ಕೆಲಸ ಮಾಡುತ್ತಿದ್ದ.

ರಾಜಾಜಿನಗರ ಪೊಲೀಸರು ಇತ್ತೀಚೆಗೆ ಇಬ್ಬರು ಹೊರ ರಾಜ್ಯದ ಸರಗಳ್ಳರನ್ನು ಗುಂಡು ಹಾರಿಸಿ ಬಂಧಿಸಿದ್ದರು. ಆರೋಪಿಗಳು ಬೆಂಗಳೂರಿಗೆ ಬಂದಾಗ ಜಗನ್​ಲಾಲ್​ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ನಗರದ ಹಲವು ಕಡೆ ಸರಗಳ್ಳತನ ನಡೆಸಿ ಜಗನ್​ಲಾಲ್​ ಮನೆಯಲ್ಲಿ ಮೂರ್ನಾಲ್ಕು ದಿನ ಉಳಿದುಕೊಂಡು ನಂತರ ಊರಿಗೆ ವಾಪಸ್​ ಆಗುತ್ತಿದ್ದೆವು. ಆಶ್ರಯ ನೀಡಿದ್ದಕ್ಕೆ ಜಗನ್​ಲಾಲ್​ ಕೂಡ ಸ್ವಲ್ಪ ಪ್ರಮಾಣದಲ್ಲಿ ಚಿನ್ನಾಭರಣ ಪಡೆಯುತ್ತಿದ್ದ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಜಗನ್​ ಲಾಲ್​ ಮನೆ ಸಮೀಪದಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕೆಲ ಸರಗಳ್ಳರು ಈತನ ಮನೆಗೆ ಹೋಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಜಗನ್​ಲಾಲ್​ನನ್ನು ಬಂಧಿಸಿದ್ದಾರೆ. ಆರೋಪಿ ಜಗಲ್​ಲಾಲ್​ ಇದುವರೆಗೂ ಎಷ್ಟು ಮಂದಿಗೆ ಆಶ್ರಯ ನೀಡಿದ್ದ. ಸರಗಳ್ಳರ ಗ್ಯಾಂಗ್​ನಲ್ಲಿ ಎಷ್ಟು ಜನ ಇದ್ದಾರೆ? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net