ಎರಡನೇ ದಿನವೂ ಸಿಇಟಿ ಸುಸೂತ್ರ: ಇಂದು ಗಡಿನಾಡು ಕನ್ನಡಿಗರಿಗೆ ಪರೀಕ್ಷೆ

CET for Group B and C Appointment
Published on

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ ಎರಡನೇ ದಿನವಾದ ಶುಕ್ರವಾರ ಸಹ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆದಿದೆ. ಭೌತಶಾಸ್ತ್ರ 1,75,428 (ಶೇ.90.23) ಮತ್ತು ರಸಾಯನಶಾಸ್ತ್ರಕ್ಕೆ 1,75,337 (ಶೇ.90.19) ಪರೀಕ್ಷಾರ್ಥಿಗಳು ಹಾಜರಾಗಿದ್ದರು.

ಕಳೆದ ವರ್ಷದಲ್ಲಿ ಭೌತಶಾಸ್ತ್ರ ಶೇ.92.27 ಮತ್ತು ರಸಾಯನಶಾಸ್ತ್ರ ಶೇ.90.88 ವಿದ್ಯಾರ್ಥಿಗಳು ಹಾಜರಾಗಿದ್ದರು. 63 ಕರೊನಾ ಪಾಸಿಟಿವ್ ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲಿಯೂ ಅಡಚಣೆ, ನಕಲು ನಡೆದ ಪ್ರಕರಣಗಳು ವರದಿಯಾಗಿಲ್ಲ. ಆ.1ರಂದು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು, ಬೆಂಗಳೂರು ಕೇಂದ್ರಗಳಲ್ಲಿ ನಡೆಯಲಿದ್ದು, 1,881 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದಾರೆಂದು ತಿಳಿಸಿದರು.

ಸಹಾಯವಾಣಿಗೆ 200 ಕರೆ: ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಸಿಇಟಿ ಸಹಾಯವಾಣಿಗೆ ಸುಮಾರು 200 ಕರೆಗಳು ಬಂದಿದ್ದವು. ಬಹುತೇಕ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆಗೆ ಕೋರಿದ್ದಾರೆ. ಇನ್ನು ಕೆಲವರು ಪ್ರವೇಶಪತ್ರವನ್ನೇ ಡೌನ್​ಲೋಡ್ ಮಾಡಿಕೊಂಡಿರಲಿಲ್ಲ. ಇಂಥ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದೇವೆ. ಕ್ವಾರಂಟೈನ್​ನಲ್ಲಿದ್ದ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಕೇಳಿದ್ದರು. ಅದಕ್ಕೂ ವ್ಯವಸ್ಥೆ ಮಾಡಲಾಗಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net