

ಬೆಂಗಳೂರು
ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಲಭ್ಯವಾಗುವ ಸೀಟುಗಳು ಹಾಗೂ ಶುಲ್ಕದ ವಿವರಗಳನ್ನು ಮುಂದಿನ ಒಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.
ಕೆಇಎ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಹಂತದಲ್ಲಿ ಸೀಟ್ ಮ್ಯಾಟ್ರಿಕ್ಸ್ ನಿರ್ಧಾರವಾಗಬೇಕಿರುವ ಕಾರಣ ಸರ್ಕಾರ ನೀಡಿದ ತಕ್ಷಣ ಪ್ರಕಟಿಸಲಾಗುತ್ತದೆ ಎಂದರು.
ಇಲ್ಲಿಯವರೆಗೂ 198 ಕಾಲೇಜುಗಳು ಸೀಟ್ ಮ್ಯಾಟ್ರಿಕ್ಸ್ ನೀಡಿವೆ. ಮತ್ತೆ ಕೆಲವು ಕಾಲೇಜುಗಳು ಇನ್‌ಟೇಕ್ ಹೆಚ್ಚಳ ಮಾಡಿಕೊಳ್ಳುತ್ತಿವೆ. ಅಂತಿಮವಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಅನುಮತಿ ಪಡೆದ ನಂತರ ಸರ್ಕಾರವು ಅಂತಿಮವಾಗಿ ಸೀಟ್ ಮ್ಯಾಟ್ರಿಕ್ಸ್ ನೀಡಲಿದೆ ಎಂದರು.
ಜೂ.6ರಂದು ಶುಲ್ಕ ನಿಗದಿ ಸಭೆ:
ಇದೇ ಜೂ.6ರಂದು ಇಂಜಿನಿಯರಿಂಗ್ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಗುತ್ತಿದೆ. ಬಹುತೇಕ ಅಂದು ಶುಲ್ಕ ನಿಗದಿ ಸಾಧ್ಯತೆ ಇದೆ. ಸಾಮಾನ್ಯವಾಗಿ ಶೇ.10 ಶುಲ್ಕ ಹೆಚ್ಚಳ ಮಾಡಲಾಗುತ್ತದೆ. ಕಳೆದ ವರ್ಷ ಸರ್ಕಾರಿ ಕೋಟಾದಲ್ಲಿ 40,110 ರೂ. ಶುಲ್ಕವಿತ್ತು. ಕೆಇಎ ಮೂಲಕ 68,793 ಇಂಜಿನಿಯರಿಂಗ್ ಸೀಟುಗಳಲ್ಲಿ 58 ಸಾವಿರ ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. 10,611 ಸೀಟುಗಳು ಖಾಲಿ ಉಳಿದಿದ್ದವು ಎಂದು ತಿಳಿಸಿದರು.