ಸಿಇಟಿಯಲ್ಲಿ ಮೈಸೂರಿನ ಮೇಘನ್ ಚರಿತ್ರೆ: ಎಲ್ಲ ವಿಭಾಗದಲ್ಲಿ ಒಬ್ಬನೇ ವಿದ್ಯಾರ್ಥಿ ಪ್ರಥಮ ರ‌್ಯಾಂಕ್ | ಆರು ಕೃಪಾಂಕ ನೀಡಿದ ಕೆಇಎ

CET F
ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇಡಿ ಎಸ್.ರಮ್ಯಾ.
Published on

ಬೆಂಗಳೂರು: 2021ರ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸಿಇಟಿ ಇತಿಹಾಸ ದಲ್ಲೇ ಮೊದಲ ಬಾರಿಗೆ ಎಲ್ಲ ವಿಭಾಗದಲ್ಲೂ ಒಬ್ಬನೇ ವಿದ್ಯಾರ್ಥಿ ರ‌್ಯಾಂಕ್ ಪಡೆದಿದ್ದಾನೆ. ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ಎಚ್.ಕೆ. ಮೇಘನ್ ಇತಿಹಾಸ ಸೃಷ್ಟಿಸಿದ ವಿದ್ಯಾರ್ಥಿ. ಇಂಜಿನಿಯರಿಂಗ್, ಬಿ.ಫಾರ್ವ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಯೋಗ, ನ್ಯಾಚುರೋಪಥಿ ವಿಭಾಗದಲ್ಲಿ ಈತ ಟಾಪರ್ ಆಗಿದ್ದಾನೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಸೋಮವಾರ ಫಲಿತಾಂಶ ಬಿಡುಗಡೆ ಮಾಡಿದರು. ಸಿಇಟಿಗೆ 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,93,447 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಇಂಜಿನಿಯರಿಂಗ್ ಕೋರ್ಸ್​ಗೆ 1,83,231, ಕೃಷಿ-1,52,518, ಪಶುಸಂಗೋಪನೆ -1,55,760, ಯೋಗ ಮತ್ತು ನ್ಯಾಚುರೋಪಥಿ-1,55,910, ಬಿ.ಫಾರ್ವ ಮತ್ತು ಡಿ ಫಾರ್ವ ಕೋರ್ಸ್​ಗೆ 1,86,638 ವಿದ್ಯಾರ್ಥಿಗಳಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ವಿಷಯ ತಜ್ಞರು ನೀಡಿದಂತೆ ಪರಿಷ್ಕೃತ ಕೀ ಉತ್ತರಗಳನ್ನು ಆಧರಿಸಿ ಮೆರಿಟ್ ಪಟ್ಟಿ ತಯಾರಿಸಲಾಗಿದೆ ಎಂದು ಕೆಇಎ ತಿಳಿಸಿದೆ. https://cetonline.karnataka.gov.in/kea/ ಹಾಗೂ http://karresults.nic.in ಲಿಂಕ್​ನಲ್ಲಿ ಫಲಿತಾಂಶ ಪಡೆಯಬಹುದು.

7000 ಫಲಿತಾಂಶ ತಡೆ: ಅಂಕಗಳ ಅಪ್​ಲೋಡ್, ವಿವಿಧ ಕಾರಣಕ್ಕಾಗಿ 7000 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ರ್ಯಾಂಕ್ ತಡೆಹಿಡಿಯಲ್ಪಟ್ಟ ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾಪ್ರತಿಯನ್ನು ಕೆಇಎ ಕಚೇರಿಯ http://keauthority-ka@nic.in ವಿಳಾಸಕ್ಕೆ ಮೇಲ್ ಮೂಲಕ ಅಥವಾ ಖುದ್ದಾಗಿ ಸಲ್ಲಿಸಿ ರ್ಯಾಂಕ್​ಗಳನ್ನು ಪಡೆಯಬಹುದು. ರ್ಯಾಂಕ್ ಸಿಕ್ಕ ಮಾತ್ರಕ್ಕೆ ಸೀಟು ಹಂಚಿಕೆಯ ಅರ್ಹತೆ ಸಿಗಲ್ಲ. ಬದಲಿಗೆ ದಾಖಲಾತಿ ಪರಿಶೀಲನೆ ನಂತರ ಅರ್ಹತೆ ಪರಿಶೀಲಿಸಲಾಗುತ್ತದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

ಸೆ.30ರಿಂದ ದಾಖಲಾತಿ ಪರಿಶೀಲನೆ: ಮೂಲ ದಾಖಲೆಗಳ ಪರಿಶೀಲನೆಗಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೌಲಭ್ಯ ಕೇಂದ್ರ ತೆರೆಯಲಿದೆ. ಅಭ್ಯರ್ಥಿಗಳು ಹತ್ತಿರದ ಕೇಂದ್ರಗಳಿಗೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಸೆ.30ರಿಂದ ದಾಖಲಾತಿ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ಕೆಇಎ ಹೇಳಿದೆ. ಅಗತ್ಯ ದಾಖಲಾತಿಗಳ ಪಟ್ಟಿಯನ್ನು ಕೆಇಎ ವೆಬ್​ಸೈಟ್​ನಲ್ಲಿ ನೀಡಲಾಗಿದೆ.

ವೈದ್ಯ ಸೀಟುಗಳಿಗೆ ಪ್ರವೇಶ: ನೀಟ್ ಫಲಿತಾಂಶ ಬಂದ ಬಳಿಕ ಅವುಗಳ ಅಂಕದ ಆಧಾರದಲ್ಲಿ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿಯ ಸೀಟುಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ಎನ್​ಎಟಿಎ (ನಾಟಾ) ಸ್ಕೋರ್ ಆಧಾರದಲ್ಲಿ ಆರ್ಕಿಟೆಕ್ಚರ್ ಸೀಟುಗಳ ಹಂಚಿಕೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ.

27ಕ್ಕೆ ಶುಲ್ಕ ಬಿಕ್ಕಟ್ಟು ಸಭೆ: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ಹೆಚ್ಚಳ ಸಂಬಂಧ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರೊಂದಿಗೆ ಸೆ.27ರಂದು ಸಭೆ ನಡೆಸಿ ತೀರ್ಮಾನ ಪ್ರಕಟಿಸಲಾಗುವುದು ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಬೆಂಗ್ಳೂರು ವಿದ್ಯಾರ್ಥಿಗಳಿಗೆ ಅತಿಹೆಚ್ಚು ರ‌್ಯಾಂಕ್

ಸಿಇಟಿಯಲ್ಲಿ ರ‌್ಯಾಂಕ್ ಪಡೆದವರ ಪೈಕಿ ಬೆಂಗಳೂರಿನ ವಿದ್ಯಾರ್ಥಿಗಳದ್ದೇ ಸಿಂಹಪಾಲು. ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ 10 ರ್ಯಾಂಕ್ ಪಡೆದವರಲ್ಲಿ 9 ವಿದ್ಯಾರ್ಥಿಗಳು ಬೆಂಗಳೂರಿನ ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಮಾಡಿದವರಾಗಿ ದ್ದಾರೆ. ಯೋಗ ಮತ್ತು ನ್ಯಾಚುರೋಪಥಿಯಲ್ಲಿ ಇಬ್ಬರು ಬೆಂಗಳೂರಿನ ವಿದ್ಯಾರ್ಥಿಗಳಿದ್ದಾರೆ. ಕೃಷಿ ವಿಜ್ಞಾನದಲ್ಲಿ ಐವರು, ಪಶುವೈದ್ಯಕೀಯದಲ್ಲಿ ಇಬ್ಬರು ಹಾಗೂ ಬಿ.ಫಾರ್ವದಲ್ಲಿ ಆರು ವಿದ್ಯಾರ್ಥಿಗಳಿದ್ದಾರೆ.

ಈ ಬಾರಿ 6 ಕೃಪಾಂಕ: ಪ್ರಶ್ನೆ ಪತ್ರಿಕೆಯ ದೋಷದ ಹಿನ್ನೆಲೆಯಲ್ಲಿ ಭೌತಶಾಸ್ತ್ರ -3 ಹಾಗೂ ಗಣಿತಕ್ಕೆ 3 ಕೃಪಾಂಕವನ್ನು ನೀಡಲಾಗಿದೆ ಎಂದು ರಮ್ಯ ತಿಳಿಸಿದರು. ಸಿಇಟಿ ಬರೆದ ಅಭ್ಯರ್ಥಿಗಳಿಗೆ ಈ ಬಾರಿ ಗರಿಷ್ಠ 8 ಕೃಪಾಂಕ ದೊರೆಯಲಿದೆ ಎಂದು ವಿಜಯವಾಣಿ ಫಲಿತಾಂಶ ಬಿಡುಗಡೆ ಒಂದುವಾರದ ಮೊದಲೇ ವರದಿ ಪ್ರಕಟಿಸಿತ್ತು. ಕಳೆದ ವರ್ಷ 8 ಕೃಪಾಂಕವನ್ನು ನೀಡಿತ್ತು.

ರ‌್ಯಾಂಕ್ ​ಪಟ್ಟಿಯಲ್ಲಿ ಒಸಿಐ ಅಭ್ಯರ್ಥಿ: ಟಾಪ್ 10 ರ್ಯಾಂಕ್​ನಲ್ಲಿ ಭಾರತೀಯ ಸಾಗರೋತ್ತರ ಅಭ್ಯರ್ಥಿ(ಐಒಸಿ) ಒಬ್ಬನಿದ್ದು, ಇವರಿಗೆ ಪರೀಕ್ಷೆ ಬರೆಯಲು ಹೈಕೋರ್ಟ್ ನಿರ್ದೇಶನ ನೀಡಿದ್ದರಿಂದ ಪರೀಕ್ಷೆ ನೀಡಲಾಗಿತ್ತು. ಒಬ್ಬ ಅಭ್ಯರ್ಥಿ ರ್ಯಾಂಕ್ ಬಂದಿದ್ದಾನೆ. ಆದರೆ, ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ನಿರ್ದೇಶನ ಅವಶ್ಯಕತೆ ಇರುವುದರಿಂದ ತಡೆಹಿಡಿಯಲಾಗಿದೆ ಎಂದು ರಮ್ಯಾ ತಿಳಿಸಿದ್ದಾರೆ.

ಇಂಜಿನಿಯರಿಂಗ್ ರ‌್ಯಾಂಕ್ ಹೆಚ್ಚಳ: ಈ ಬಾರಿ ಇಂಜಿನಿಯರಿಂಗ್ ಸೀಟು ಪಡೆಯಲು ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ 30 ಸಾವಿರ ಹೆಚ್ಚಳವಾಗಿದೆ. 2020ರಲ್ಲಿ 1,53,470 ಅಭ್ಯರ್ಥಿಗಳು ಹೆಚ್ಚಿನ ಅಂಕಗಳಿಸಲು ಅರ್ಹತೆ ಪಡೆದಿದ್ದರು. ಈ ಬಾರಿ 1,83,231 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಒಟ್ಟಾರೆ ಈ ಬಾರಿ 29,761 ಅಭ್ಯರ್ಥಿಗಳು ಹೆಚ್ಚಾಗಿದ್ದಾರೆ. ದ್ವಿತೀಯ ಪರೀಕ್ಷೆ ಇಲ್ಲದೆ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಹಿನ್ನೆಲೆಯಲ್ಲಿ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗಿದೆ.

ಸದ್ಯ ನಾನು ಐಐಎಸ್ಸಿನಲ್ಲಿ ಪ್ರವೇಶ ಪಡೆದಿದ್ದೇನೆ. ಆದರೆ, ನನಗೆ ಐಐಟಿನಲ್ಲಿ ವ್ಯಾಸಂಗ ಮಾಡಬೇಕೆಂಬ ಆಸೆ ಇದೆ. ಇದರ ಪ್ರವೇಶ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಪ್ರತಿನಿತ್ಯ 6-7 ಗಂಟೆ ಸಮಯ ವ್ಯಾಸಂಗ ಮಾಡುತ್ತಿದ್ದೆ.

| ಪ್ರೇಮ್​ಕುಮಾರ್ ಚಕ್ರಬೊರ್ತಿ ಎನ್​ಪಿಎಸ್, ಯಲಹಂಕ, 2ನೇ ರ‌್ಯಾಂಕ್ (ಇಂಜಿನಿಯರಿಂಗ್)

ನನಗೆ ದ್ವಿತೀಯ ರ‌್ಯಾಂಕ್ ಬರಲಿದೆ ಎಂಬ ನಿರೀಕ್ಷೆ ಇರಲಿಲ್ಲ. ಫಲಿತಾಂಶ ನೋಡಿದ ಮೇಲೆ ಖುಷಿಯಾಗುತ್ತಿದೆ. ಪ್ರತಿ ನಿತ್ಯ 6ರಿಂದ 8ಗಂಟೆ ವ್ಯಾಸಂಗ ಮಾಡುತ್ತಿದ್ದೆ. ನಾನು ವೈದ್ಯನಾಗಬೇಕೆಂಬ ಆಸೆಯಿಂದ ನೀಟ್ ಬರೆದಿದ್ದೇನೆ.

| ವರುಣ್ ಆದಿತ್ಯ ಚೈತನ್ಯ ಟೆಕ್ನೋ ಸ್ಕೂಲ್ ಮಾರತ್​ಹಳ್ಳಿ, 2ನೇ ರ‌್ಯಾಂಕ್ (ಯೋಗ)

ಫಲಿತಾಂಶ ಖುಷಿ ತಂದಿದೆ. ಎಕ್ಸ್​ಪರ್ಟ್ ಪ.ಪೂ.ಕಾಲೇಜು ಬೋಧಕ ವರ್ಗ ಮೋಕ್ ಟೆಸ್ಟ್, ವಾಟ್ಸ್​ಆಪ್ ಗ್ರೂಪ್ ಸಂವಹನ ಮುಂತಾದ ಹೆಚ್ಚುವರಿ ಚಟುವಟಿಕೆಗಳ ಮೂಲಕ ಪರೀಕ್ಷೆ ಎದುರಿಸಲು ಸಹಕಾರ ನೀಡಿತು. ನೀಟ್ ಪರೀಕ್ಷೆ ಬರೆದಿದ್ದು, ವೈದ್ಯಕೀಯ ಓದುವ ಉದ್ದೇಶ ಹೊಂದಿದ್ದೇನೆ.

| ರೀಥಂ ಬಿ. ಎಕ್ಸ್​ಪರ್ಟ್ ಪ.ಪೂ.ಕಾಲೇಜು, ಮಂಗಳೂರು

ಸಾಂಸ್ಕೃತಿಕ ನಗರಿಯ ಅನನ್ಯ ಪ್ರತಿಭೆ

ಮೈಸೂರು: ಐದು ಕೋರ್ಸ್​ಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಗಮನ ಸೆಳೆದಿರುವ ಪ್ರತಿಭಾನ್ವಿತ ವಿದ್ಯಾರ್ಥಿ ಎಚ್.ಕೆ.ಮೇಘನ್ ನಗರದ ರಾಮಕೃಷ್ಣನಗರದ ನಿವಾಸಿ ಕೃಷ್ಣಯ್ಯ ಹಾಗೂ ಲೀಲಾವತಿ ದಂಪತಿಯ ಕಿರಿಯ ಪುತ್ರನಾಗಿದ್ದು, ಪಾಲಕರಿಬ್ಬರೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ. ಕೃಷ್ಣಯ್ಯ ಕೆ.ಆರ್. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾದರೆ, ತಾಯಿ ಲೀಲಾವತಿ ಮೈಸೂರಿನ ನೃಪತುಂಗ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ. ‘ಮಗನ ಸಾಧನೆ ಬಗ್ಗೆ ಖುಷಿ ಇದೆ. ಸಾಕಷ್ಟು ಪರಿಶ್ರಮಪಟ್ಟು ಓದಿದ್ದಾನೆ. ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುತ್ತಾನೆ ಎಂಬ ವಿಶ್ವಾಸವಿತ್ತು. ಅದರಂತೆ ಸಿಇಟಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾನೆ. ನೀಟ್ ಪರೀಕ್ಷೆ ಬರೆದಿದ್ದಾನೆ. ಅದರ ಫಲಿತಾಂಶ ಬಂದ ಬಳಿಕ ಮೆಡಿಕಲ್​ಗೆ ಸೇರಲಿದ್ದಾನೆ ಎಂದು ಮೇಘನ್ ಅವರ ತಂದೆ ಕೃಷ್ಣಯ್ಯ ‘ವಿಜಯವಾಣಿ’ಗೆ ತಿಳಿಸಿದರು.

ವೈದ್ಯನಾಗಬೇಕು ಎಂಬ ಕನಸಿದೆ. ಅಂತೆಯೇ ನೀಟ್ ಕೂಡ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ. ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯದಲ್ಲಿ ಪ್ರಥಮ ರ್ಯಾಂಕ್ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಮನೆಯಲ್ಲಿ ಅಪ್ಪ-ಅಮ್ಮ ತುಂಬ ಪ್ರೋತ್ಸಾಹ ನೀಡಿದರು. ಕಾಲೇಜಿನಲ್ಲಿ ಅಧ್ಯಾಪಕರು ಪಠ್ಯದ ಅನುಮಾನಗಳನ್ನು ಪರಿಹರಿಸಲು ಸಹಾಯ ಮಾಡುತ್ತಿದ್ದರು.

| ಎಚ್.ಕೆ. ಮೇಘನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net