

ಬೆಂಗಳೂರು 2024ನೇ ಸಾಲಿನ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಾಜಿ ಸೈನಿಕರಾಗಿದ್ದಲ್ಲಿ ಅಂಥವರು ಸೇವಾಸಿಂಧು ಪೋರ್ಟಲ್ನಲ್ಲಿ ತಮ್ಮಸಿಇಟಿ ಅರ್ಜಿ ಸಂಖ್ಯೆ ಅಥವಾ ಆರ್ಮಿ ಸಂಖ್ಯೆಯನ್ನು ನಮೂದಿಸಿ ‘ಮಾಜಿ ಸೈನಿಕ ಪ್ರಮಾಣಪತ್ರವನ್ನು ಪಡೆಯಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಅಭ್ಯರ್ಥಿಗಳು ಕೆಲವು ಮಾಹಿತಿ ಕೋರಿದ್ದ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ 7 ವರ್ಷ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು 10ನೇ ತರಗತಿ ತೇರ್ಗಡೆಯಾಗಿದ್ದಲ್ಲಿ 11 ಮತ್ತು 12ನೇ ತರಗತಿಗಳ ವ್ಯಾಸಂಗ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಬೇಕಾಗಿಲ್ಲ. ಮೇಲಿನ ದಾಖಲೆಗಳು ಸ್ಯಾಟ್ಸ್ ಡೇಟಾಬೇಸ್‌ನಿಂದ ಬಂದಿದ್ದರೂ ಯಾವುದೇ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಿಕ್ಕಂತೆ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಮೀಸಲು ಕೋರಿದ್ದಲ್ಲಿ ಅಂಥ ಅಭ್ಯರ್ಥಿಗಳು 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ದಾಖಲಾತಿಗಳನ್ನು ಸಲ್ಲಿಸಬೇಕು. ಆದರೆ ಈ ದಾಖಲಾತಿಗಳು ಬಿಇಒ/ಡಿಡಿಪಿಐ ಕಚೇರಿಗಳಿಗೆ ಆನ್‌ಲೈನ್ ಪರಿಶೀಲನೆಗೆ ಹೋಗುವುದರಿಂದ ಇವುಗಳನ್ನು ಶಾಲಾ- ಕಾಲೇಜುಗಳಿಂದ ಪಡೆದರೆ ಸಾಕಾಗಿದ್ದು, ಇವುಗಳಿಗೆ ಬಿಇ/ಡಿಡಿಪಿಐ ಮೇಲುಸಹಿ ಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಜ.19ರಂದು ಹೊರಡಿಸಿದ್ದ ಸೂಚನೆಗಳನ್ನು ಹಿಂಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.