ಲಾಕ್​ಡೌನ್ 4.0 ಪಕ್ಕಾ

Lockdown 16 mkay 20
Published on

ನವದೆಹಲಿ: ಕರೊನಾ ವೈರಾಣು ವ್ಯಾಪಕ ಹರಡುವಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿ ಮಾಡಿದ್ದ 3ನೇ ಹಂತದ ಲಾಕ್​ಡೌನ್ ಭಾನುವಾರ ಅಂತ್ಯಗೊಳ್ಳಲಿದ್ದರೂ ಮತ್ತೊಂದಿಷ್ಟು ವಿನಾಯಿತಿಗಳೊಂದಿಗೆ ಮೇ 31ರ ತನಕ ವಿಸ್ತರಿಸಲು ಕೇಂದ್ರ ಚಿಂತನೆ ನಡೆಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಕರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಂಪೂರ್ಣವಾಗಿ ಲಾಕ್​ಡೌನ್ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಮೇ 11ರಂದೇ ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಸಿಎಂಗಳ ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ ಸ್ಪಷ್ಟಪಡಿಸಿದ್ದರು. ಮತ್ತೊಂದೆಡೆ 4ನೇ ಹಂತದ ಲಾಕ್​ಡೌನ್ ಹೇಗಿರಬೇಕೆಂಬ ಬಗ್ಗೆ ರಾಜ್ಯಗಳು ಶುಕ್ರವಾರವೇ ಅಭಿಪ್ರಾಯಗಳನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿವೆ. ಅದಕ್ಕೆ ಪೂರಕವಾಗಿಯೇ ಕೇಂದ್ರ ನಿಯಮಾವಳಿ ರೂಪಿಸುತ್ತಿದ್ದು, ಸಾರ್ವ ಜನಿಕ ಜೀವನ ಸಹಜ ಸ್ಥಿತಿಗೆ ಮರಳಲು ಸೂಕ್ತವೆನಿಸುವ ಕೆಲವು ವಿನಾಯಿತಿ ನೀಡಲು ಉದ್ದೇಶಿಸಿದೆ.

ಈ ಬಗ್ಗೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಭಿಪ್ರಾಯ ಸ್ಪಷ್ಟಪಡಿಸಿದ್ದ ವೇಳೆ ಹರಿಯಾಣ ಸಿಎಂ, ಬಿಜೆಪಿ ಮುಖಂಡ ಮನೋಹರ ಲಾಲ್ ಖಟ್ಟರ್ ಕೂಡ ಅಮರಿಂದರ್ ವಾದ ಬೆಂಬಲಿಸುವುದಾಗಿ ತಿಳಿಸಿದ್ದರು. ಗಲ್ಲಿ, ಓಣಿಗಳಿಂದ ಕೂಡಿದ ಕಿರಿದಾದ ಪ್ರದೇಶಗಳಿರುವ ದೆಹಲಿಯಲ್ಲಿ ವಲಯಗಳನ್ನು ಜಿಲ್ಲೆಗಳ ಅನ್ವಯ ನಿರ್ಧಾರ ಮಾಡಲಾಗದು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಸೂಕ್ತ ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಕೇಂದ್ರ ನಮಗೆ ಆ ಅಧಿಕಾರ ನೀಡಬೇಕು ಎಂದು ಕೇಜ್ರಿವಾಲ್ ಕೂಡ ಪ್ರಧಾನಿಯವರಲ್ಲಿ ವಿನಂತಿಸಿದ್ದರು. ಹೀಗಾಗಿ, ವಲಯ ವಿಂಗಡಣೆಯ ಪೂರ್ಣ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಸಾಧ್ಯತೆ ಹೆಚ್ಚು ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಾಗೇ, ಲಾಕ್​ಡೌನ್ ನಿಯಮಗಳನ್ನು ತಮ್ಮ ರಾಜ್ಯಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಿಕೊಂಡು ಜಾರಿಗೊಳಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಬಹುದು. ಕೆಂಪು ವಲಯ ಹೊರತುಪಡಿಸಿ ಉಳಿದೆಡೆಗಳಲ್ಲಿ ಮಾರುಕಟ್ಟೆಗಳನ್ನು ತೆರೆಯುವ ವಿಷಯದಲ್ಲಿ ಹಾಗೂ ಅಗತ್ಯ ಸಾಮಗ್ರಿ ವ್ಯಾಪ್ತಿಗೆ ಬಾರದ ಅಂಗಡಿಗಳಿಗೆ ಸಮ-ಬೆಸ ನಿಯಮ ಅನ್ವಯಿಸಿ ಆರಂಭಕ್ಕೆ ಅನುಮತಿ ನೀಡಬಹುದು.

ವಿಮಾನಯಾನ ಸಸ್ಪೆನ್ಸ್ 

ದೇಶೀಯ ವಿಮಾನ ಹಾರಾಟ ಆರಂಭಿಸಬೇಕೆನ್ನುವುದು ಕೇಂದ್ರದ ಅಭಿಪ್ರಾಯ. ಆದರೆ, ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಂಭವವಿರುವುದರಿಂದ ಕೆಲವು ರಾಜ್ಯಗಳು ಸದ್ಯದ ಮಟ್ಟಿಗೆ ಇದು ಸೂಕ್ತವಲ್ಲ ಎಂಬ ನಿಲುವನ್ನು ತಿಳಿಸಿದ್ದವು. ಹೀಗಾಗಿ, ವಿವಿಧ ರಾಜ್ಯಗಳ ನಗರಗಳ ಮಧ್ಯೆ ವಿಮಾನ ಸಂಚಾರ ಪುನರಾರಂಭದ ಬಗ್ಗೆ ಆಯಾ ರಾಜ್ಯಗಳೇ ನಿರ್ಧರಿಸಬಹುದು ಎಂದು ಕೇಂದ್ರ ಸ್ಪಷ್ಟಪಡಿಸಬಹುದು. ಉದಾಹರಣೆಗೆ ಬೆಂಗಳೂರು-ದೆಹಲಿ ವಿಮಾನ ಸಂಚಾರ ಆರಂಭಗೊಳ್ಳಬೇಕೆಂದರೆ ಎರಡೂ ರಾಜ್ಯಗಳ ಪ್ರತಿನಿಧಿಗಳು ಮಾತುಕತೆ ಮೂಲಕ ತೀರ್ವನಿಸಬಹುದು ಎಂದು ಹೇಳಲಾಗುತ್ತಿದೆ.

ರಾಜ್ಯಗಳಿಗೆ ಅಧಿಕಾರ?: ಒಟ್ಟಾರೆ ಕರೊನಾ ಕೇಸುಗಳನ್ನು ಆಧರಿಸಿ ಕೆಂಪು, ಹಸಿರು, ಕಿತ್ತಳೆ ವಲಯ ತೀರ್ವನಿಸುವ ಬಗ್ಗೆ ರಾಜ್ಯಗಳಿಗೆ ಹೆಚ್ಚು ಅಧಿಕಾರ ಇರಬೇಕು ಎನ್ನುವುದು ಹಲವು ರಾಜ್ಯಗಳ ವಾದ.

ಮಾಸ್ಕ್ ಕಡ್ಡಾಯ: ಮೂಲಗಳ ಪ್ರಕಾರ ದೇಶಾದ್ಯಂತ ಇನ್ನೂ 1 ವರ್ಷ ಮಾಸ್ಕ್ ಧರಿಸುವುದನ್ನು ಕಡ್ಡಾಯ ಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಸ್ತರಣೆ ಕೋರಿದವರು..

ತೆಲಂಗಾಣ, ಪಂಜಾಬ್, ಒಡಿಶಾ, ಮಹಾರಾಷ್ಟ್ರ, ಪ.ಬಂಗಾಳ, ಅಸ್ಸಾಂ, ಕಠಿಣ ನಿಯಮಾವಳಿ ಗಳನ್ನೊಳಗೊಂಡ ಲಾಕ್​ಡೌನ್ ಮೇ 31ರ ತನಕ ವಿಸ್ತರಣೆಯಾಗಬೇಕೆಂದು ಮನವಿ ಮಾಡಿವೆ.

ಇಂದು ಮಾರ್ಗಸೂಚಿ

ಲಾಕ್​ಡೌನ್ -3 ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಭಾನುವಾರ ಲಾಕ್​ಡೌನ್-4ರ ಮಾರ್ಗಸೂಚಿ ಪ್ರಕಟವಾಗಲಿದೆ. ಅದರಲ್ಲಿರುವಂತೆ ನಿರ್ಬಂಧ, ವಿನಾಯಿತಿ ಸೋಮವಾರದಿಂದ ಜಾರಿಯಾಗಲಿದೆ.

ಓಡೀತೇ ಮೆಟ್ರೋ?: ದೆಹಲಿ, ಬೆಂಗಳೂರು, ಜೈಪುರ ಸೇರಿದಂತೆ ವಿವಿಧ ನಗರಗಳಲ್ಲಿ ಮೆಟ್ರೋ ಸಂಚಾರದ ಬಗ್ಗೆ ಕೇಂದ್ರ ತೀರ್ವನಿಸಬೇಕಿದೆ. ಒಂದೊಂದು ಕೋಚ್​ನಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶ ನೀಡಿ ಮೆಟ್ರೋ ಪುನರಾರಂಭಗೊಂಡರೂ ಅಚ್ಚರಿ ಇಲ್ಲ. ಕೆಂಪು ವಲಯಗಳಲ್ಲಿ ಮಾತ್ರ ಸದ್ಯಕ್ಕೆ ಮೆಟ್ರೋ ಆರಂಭ ಅಸಾಧ್ಯ ಎಂದು ಹೇಳಲಾಗುತ್ತಿದೆ.

ಮಾಲ್ ತೆರೆಯಲ್ಲ; ಮಾಲ್ ತೆರೆಯಲು ಕೇಂದ್ರ ಒಪ್ಪಿಲ್ಲ ಎನ್ನಲಾಗಿದೆ. ಹಾಗಿದ್ದರೂ ಒಂದಷ್ಟು ಕಠಿಣ ಕ್ರಮಗಳಡಿ ಮಾಲ್​ಗಳಲ್ಲಿರುವ ಕೆಲವು ಹೋಟೆಲ್​ಗಳ ಆರಂಭಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ.

ಯಾವುದು ಆರಂಭ

ಮೇ 18ರಿಂದ ಸಾರ್ವಜನಿಕ ವಾಹನ ಸಂಚಾರ, ಬಸ್, ಟ್ಯಾಕ್ಸಿ, ಆಟೋ ರಿಕ್ಷಾಗಳು ಓಡಾಟ ಆರಂಭಿಸುವ ಸಾಧ್ಯತೆಯಿದೆ. ಆದರೆ, ರಿಕ್ಷಾಗಳಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರಿಗೆ ಪ್ರಯಾಣಿಸಲು ಅವಕಾಶ ನೀಡಬಹುದು; ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಸಂಚಾರ ರೆಡ್ ಜೋನ್​ಗೂ

ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸೋಮವಾರದಿಂದ ರೆಡ್ ಜೋನ್​ಗಳಲ್ಲೂ ಹೇರ್ ಕಟಿಂಗ್ ಸೆಲೂನ್​ಗಳ ಪುನರಾರಂಭಕ್ಕೆ ಅನುಮತಿ ಸಿಗುವ ಲಕ್ಷಣಗಳಿವೆ.

ಯಾವುದು ಇಲ್ಲ!

ಶಾಲೆ, ಕಾಲೇಜು, ಸಿನಿಮಾ ಥಿಯೇಟರ್ ಬಂದ್ ಮುಂದುವರಿಕೆ ಬಹುತೇಕ ಖಚಿತ. ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭದ ಬಗ್ಗೆ ಕೇಂದ್ರ ಚಿಂತನೆ ನಡೆಸಿಲ್ಲ.

ವಲಸಿಗರ ಸಮಸ್ಯೆಗೆ ಕ್ರಮ

ನಗರಗಳನ್ನು ಬಿಟ್ಟು ತಮ್ಮ ಹಳ್ಳಿಗಳಿಗೆ ವಾಪಸಾಗಿರುವ/ಆಗುತ್ತಿರುವ ವಲಸಿಗರ ಕಲ್ಯಾಣಕ್ಕೆಂದೇ ರಾಜ್ಯ ಸರ್ಕಾರಗಳು ಪ್ರತ್ಯೇಕ ಅನುದಾನ ಸಿದ್ಧಪಡಿಸಿ ನೆರವಿಗೆ ಧಾವಿಸಬೇಕು. ಲಕ್ಷಾಂತರ ಮಂದಿ ನಿರುದ್ಯೋಗಿ ವಲಸಿಗ ಕುಟುಂಬಗಳ ಮುಂದಿನ ದಿನಗಳ ಬದುಕು ದುಸ್ತರವಾಗಿರಲಿದ್ದು, ವಲಸಿಗರ ಪುನರುಜ್ಜೀವನ ಸಂಬಂಧ ಸೂಕ್ತ ಕ್ರಮಗಳ ಜಾರಿಗೆ ಕೇಂದ್ರ ಸರ್ಕಾರ ಸಲಹೆ, ನಿರ್ದೇಶನಗಳನ್ನು ನೀಡಬಹುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net