1 ಲಕ್ಷ ಕೋಟಿ ರೂ. ತೆರಿಗೆ ಬಾಕಿ! ಅಕ್ರಮ ನಿಯಂತ್ರಣಕ್ಕೆ ಕ್ರಮ, ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ನೋಟಿಸ್

Gambling
Published on

ನವದೆಹಲಿ: ವಿವಿಧ ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಜಿಎಸ್​ಟಿ ಅಧಿಕಾರಿಗಳು -ಠಿ;1 ಲಕ್ಷ ಕೋಟಿ ರೂ. ಮೊತ್ತದ ನೋಟಿಸ್​ಗಳನ್ನು ಜಾರಿ ಮಾಡಿದ್ದಾರೆ. ಇದು ಜಿಎಸ್​ಟಿ ಜಾರಿ ನಂತರ ನೀಡಲಾದ ಅತಿ ಹೆಚ್ಚಿನ ಮೊತ್ತದ ನೋಟಿಸ್ ಆಗಿದೆ. ಗೇಮಿಂಗ್ ಸಂಸ್ಥೆಗಳು ವಿವಿಧ ಮಾರ್ಗಗಳಲ್ಲಿ ತೆರಿಗೆ ವಂಚಿಸಿರುವುದು ಖಚಿತವಾಗಿದ್ದರಿಂದ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್​ಲೈನ್ ಗೇಮಿಂಗ್ ಮೇಲೆ ಶೇ. 28% ತೆರಿಗೆ ವಿಧಿಸಲು ಕಳೆದ ಆಗಸ್ಟ್​ನಲ್ಲಿ ನಡೆದಿದ್ದ ಜಿಎಸ್​ಟಿ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು. ಆಟ ಆಡಲು ಠೇವಣಿ ಮಾಡಿದ ಒಟ್ಟು ಹಣದ ಮೇಲೆ ಶೇ. 28 ತೆರಿಗೆ ಪಾವತಿ ಮಾಡಬೇಕು ಎಂದು ಪ್ರಾಧಿಕಾರ ಹೇಳಿತ್ತು. ಕಳೆದ ವಾರ ಗೋವಾ ಮೂಲದ ಕ್ಯಾಸಿನೊ ಕಂಪನಿ ಡೆಲ್ಟಾ ಕಾರ್ಪ್​ಗೆ 6,384 ಕೋಟಿ ರೂ. ಮೊತ್ತದ ಜಿಎಸ್​ಟಿ ನೋಟಿಸ್ ನೀಡಲಾಗಿತ್ತು. ಈ ಕಂಪನಿಯ ಮೇಲೆ ಒಟ್ಟಾರೆ 23,000 ಕೋಟಿ ರೂ. ತೆರಿಗೆ ನೋಟಿಸ್ ಇದೆ. ಈ ಬಗ್ಗೆ ಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದೆ. ಕಳೆದ ತಿಂಗಳು 16,800 ಕೋಟಿ ರೂ. ತೆರಿಗೆ ವಂಚನೆ ಮಾಡಿದ ಬಗ್ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.

ಡ್ರೀಮ್ 11 ಸಹಿತ ಅನೇಕ ಆನ್​ಲೈನ್ ಗೇಮಿಂಗ್ ಸಂಸ್ಥೆಗಳಿಗೂ ಈ ತಿಂಗಳು ತೆರಿಗೆ ನೋಟಿಸ್ ನೀಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ 21,000 ಕೋಟಿ ರೂ. ಜಿಎಸ್​ಟಿ ವಂಚನೆ ಆರೋಪದ ಮೇಲೆ ಗೇಮ್ಸ್​ ಕ್ರಾಫ್ಟ್​ಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿತ್ತು.

ಕಾಯ್ದೆ ಏನು ಹೇಳುತ್ತದೆ?

ಇ-ಗೇಮಿಂಗ್, ಕ್ಯಾಸಿನೋಗಳು, ಕುದುರೆ ರೇಸ್​ಗೆ ತೆರಿಗೆ ವಿಧಿಸಲು ತಿದ್ದುಪಡಿ ಮಾಡಲಾದ ಜಿಎಸ್​ಟಿ ಕಾನೂನು ನಿಬಂಧನೆಗಳ ಅನುಷ್ಠಾನಕ್ಕೆ ಅ. 1ರಂದು ಹಣಕಾಸು ಸಚಿವಾಲಯ ಆದೇಶ ನೀಡಿದೆ. ಸಂಯೋಜಿತ ಸರಕು ಮತ್ತು ಸೇವಾ ತೆರಿಗೆಗೆ ತಿದ್ದುಪಡಿ ಪ್ರಕಾರ ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಆನ್​ಲೈನ್ ಗೇಮಿಂಗ್ ಪ್ಲಾಟ್​ಫಾಮ್ರ್ ಗಳು ದೇಶದಲ್ಲಿ ನೋಂದಣಿ ಮಾಡುವುದು ಕಡ್ಡಾಯ. ದೇಶೀಯ ಕಾನೂನಿಗೆ ಅನುಗುಣವಾಗಿ ಅವು ತೆರಿಗೆ ಪಾವತಿಸಬೇಕು ಎಂದು ಜಿಎಸ್​ಟಿ ಪ್ರಾಧಿಕಾರ ಹೇಳಿದೆ. ಕೇಂದ್ರೀಯ ಜಿಎಸ್​ಟಿ ಕಾಯಿದೆಯ ಇತ್ತೀಚಿನ ಬದಲಾವಣೆಗಳ ಪ್ರಕಾರ, ಆನ್​ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ರೇಸ್​ಗಳನ್ನು ಈಗ ಲಾಟರಿ, ಬೆಟ್ಟಿಂಗ್ ಮತ್ತು ಜೂಜಿನಂತೆಯೇ ಪರಿಗಣಿಸಲಾಗುತ್ತದೆ. ಬೆಟ್ಟಿಂಗ್ ಮೊತ್ತದ ಸಂಪೂರ್ಣ ಮುಖಬೆಲೆಯ ಮೇಲೆ ಶೇ. 28 ಜಿಎಸ್​ಟಿ ಅನ್ವಯವಾಗುತ್ತದೆ.

ಕಠಿಣ ಕ್ರಮ ಏಕೆ?

* ಆನ್​ಲೈನ್ ಬೆಟ್ಟಿಂಗ್ ಮೂಲಕ ದೇಶದ ಯುವಜನರನ್ನು ಆಕರ್ಷಣೆ ಮಾಡಿ, ಜೂಜಿನ ಚಟ ಅಂಟಿಸುವ ಭೀತಿ.

* ಆನ್​ಲೈನ್ ರಮ್ಮಿ ಸಹಿತ ಹಲವು ಆಪ್​ಗಳಲ್ಲಿ ಲಕ್ಷಾಂತರ ರೂ. ಹಣ ಹಾಕಿ ನಷ್ಟ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಸಾಕಷ್ಟಿದೆ.

* ವಿದೇಶದಿಂದ ಬೆಟ್ಟಿಂಗ್ ಆಪ್​ಗಳನ್ನು ನಿಯಂತ್ರಣ ಮಾಡಿ, ಅಪಾರ ಮೊತ್ತವನ್ನು ತೆರಿಗೆ ತಪ್ಪಿಸಿ ಆದೇಶಕ್ಕೆ ಸಾಗಣೆ ಮಾಡಲಾಗುತ್ತದೆ. ಇದರಿಂದ ದೇಶಕ್ಕೆ ನಷ್ಟ ಉಂಟಾಗುತ್ತದೆ.

* ಬೆಟ್ಟಿಂಗ್ ಆಪ್​ಗಳಲ್ಲಿ ಯಾವುದೇ ಸುರಕ್ಷತೆ, ಪಾರದರ್ಶಕತೆ ಇಲ್ಲ. ಜನರನ್ನು ಸುಲಭವಾಗಿ ಮೋಸ ಮಾಡಬಹುದು. ಆಮಿಷ, ಜಾಹೀರಾತುಗಳನ್ನು ನೀಡಿ ನಂತರ ಮೋಸದ ಜಾಲಕ್ಕೆ ಜನರನ್ನು ಸಿಲುಕಿಸಬಹುದು.

* ಇತ್ತೀಚೆಗೆ ಚೀನಾ ಮೂಲದ ಸಾಲದ ಆಪ್​ಗಳ ಜಾಲಕ್ಕೆ ಬಿದ್ದ ಜನ ಭಾರಿ ಕಿರುಕುಳ ಅನುಭವಿಸಿದ್ದರು. ನಂತರ ಕೇಂದ್ರ ಸರ್ಕಾರ ಬಹುತೇಕ ಸಾಲದ ಆಪ್​ಗಳನ್ನು ಬಂದ್ ಮಾಡಿಸಿದೆ. ಆದರೆ ನೂರಾರು ಅನಧಿಕೃತ ಬೆಟ್ಟಿಂಗ್ ಆಪ್​ಗಳು ಇನ್ನೂ ಸಕ್ರಿಯವಾಗಿವೆ.

* ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಕೂಡ ಆನ್​ಲೈನ್ ಬೆಟ್ಟಿಂಗ್ ಆಪ್ ನಡೆಸುತ್ತಿದ್ದಾನೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಇಲ್ಲಿ ಸಂಗ್ರಹಿಸಿದ ಹಣವನ್ನು ದೇಶದ್ರೋಹ, ಸಮಾಜವಿರೋಧಿ ಚಟುವಟಿಕೆಗಳಿಗೆ ಬಳಕೆ ಆಗುವ ಸಾಧ್ಯತೆ ಹೆಚ್ಚಿದೆ.

300 ಬಿಲಿಯನ್ ಡಾಲರ್!

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಆನ್​ಲೈನ್ ಗೇಮಿಂಗ್ ವಿಭಾಗಗಳು 2026-27ರ ವೇಳೆಗೆ ಭಾರತದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) 300 ಬಿಲಿಯನ್ ಡಾಲರ್ ಕೊಡುಗೆ ನೀಡಬಹುದು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಹೇಳಿದ್ದಾರೆ. ಹೆಚ್ಚಿನ ತೆರಿಗೆ ಕುರಿತು ಆನ್​ಲೈನ್ ಗೇಮಿಂಗ್ ಉದ್ಯಮ ಕಳವಳ ವ್ಯಕ್ತಪಡಿಸಿದೆ. ಅನುಮತಿಸ ಬಹುದಾದ ಮತ್ತು ಕಾನೂನುಬದ್ಧ ಆನ್​ಲೈನ್ ಗೇಮಿಂಗ್​ಗೆ ಅವಕಾಶ ಇದೆ. ಆದರೆ ಗೇಮಿಂಗ್ ವಲಯದಲ್ಲಿ ಕೆಲವರು ಇಂಟರ್ನೆಟ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆನ್​ಲೈನ್ ಗೇಮಿಂಗ್ ಚೌಕಟ್ಟನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದ್ದರು.

ಯಾರಿಗೆ ಎಷ್ಟು ನೋಟಿಸ್?

* ಡ್ರೀಮ್ 11 - 40 ಸಾವಿರ ಕೋಟಿ ರೂ.

* ಡೆಲ್ಟಾ ಕಾರ್ಪ್ - 23 ಸಾವಿರ ಕೋಟಿ ರೂ.

* ಗೇಮ್ಸ್​ಕ್ರಾಫ್ಟ್ - 21 ಸಾವಿರ ಕೋಟಿ ರೂ.

ಮಹದೇವ್ ಆಪ್ ಪ್ರಕರಣ

ಇತ್ತೀಚೆಗೆ ಹೊರಬಂದ ಮಹದೇವ್ ಬೆಟ್ಟಿಂಗ್ ಆಪ್ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಬಾಲಿವುಡ್ ನಟ ರಣಬೀರ್ ಕಪೂರ್, ನಟಿ ಶ್ರದ್ಧಾ ಕಪೂರ್ ಸಹಿತ ಹಲವು ಬಾಲಿವುಡ್ ನಟರೂ ಇದರಲ್ಲಿ ಭಾಗಿಯಾಗಿರುವುದು ಜನ ಹುಬ್ಬೇರಿಸುವಂತೆ ಮಾಡಿತ್ತು. ಈ ಪ್ರಕರಣ ಸಂಬಂಧ 39 ಸ್ಥಳಗಳಲ್ಲಿ ಶೋಧ ನಡೆಸಿದ್ದ ಇ.ಡಿ. 417 ಕೋಟಿ ರೂ. ಮೊತ್ತದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿತ್ತು. ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ದುಬೈನಿಂದ ಈ ಆಪ್ ನಿರ್ವಹಿಸುತ್ತಿದ್ದರು. ಕಂಪನಿಯು ದಿನಕ್ಕೆ -ಠಿ; 200 ಕೋಟಿ ಲಾಭ ಗಳಿಸುತ್ತಿದೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ವಿದೇಶದಿಂದ ಬರುವ ಆದಾಯವನ್ನು ದೊಡ್ಡ ಪ್ರಮಾಣದಲ್ಲಿ ಹವಾಲಾ ಮೂಲಕ ಭಾರತಕ್ಕೆ ತರಲಾಗುತ್ತಿತ್ತು. ಪೊಲೀಸರು, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೂ ಇದರಲ್ಲಿ ಪಾಲು ನೀಡಲಾಗುತ್ತಿತ್ತು. ಕೇಂದ್ರ ಸರ್ಕಾರಕ್ಕೆ ಅಪಾರ ಮೊತ್ತದ ತೆರಿಗೆ ಹಣ ವಂಚನೆ ಮಾಡಲಾಗಿತ್ತು. ಈ ಪ್ರಕರಣವನ್ನು ಪ್ರಸ್ತುತ ಇ.ಡಿ. ತನಿಖೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net