

ನವದೆಹಲಿ: ಇಂತಹ ಬೆದರಿಕೆಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆ ನೀಡಲು ಬಯಸುವುದಿಲ್ಲ, ಆದರೆ, ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ....
ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನೂನ್ ಅವರ ಬೆದರಿಕೆಗೆ ಕೇಂದ್ರ ಸರ್ಕಾರವು ಹೀಗೆ ಹೆಚ್ಚಿನ ಮಹತ್ವ ನೀಡದೆ ತಣ್ಣಗೆ ಪ್ರತಿಕ್ರಿಯಿಸಿದೆ.
ಐವರು ದಾಳಿಕೋರರು ಸೇರಿ 15 ಜನರನ್ನು ಬಲಿತೆಗೆದುಕೊಂಡ 2001 ರ ಸಂಸತ್ ದಾಳಿ ನಡೆದುನ 22 ವರ್ಷ ತುಂಬುವ ಸಂದರ್ಭದಲ್ಲಿಯೇ ಡಿಸೆಂಬರ್ 13 ರಂದು ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಪನ್ನುನ್ ಅವರ ಇತ್ತೀಚಿನ ಬೆದರಿಕೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.
"ನಾವು ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಾವು ಇಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಬೆದರಿಕೆ ಹಾಕುವ ಮತ್ತು ಹೆಚ್ಚಿನ ಕವರೇಜ್ ಪಡೆಯುವ ಇಂತಹ ಉಗ್ರಗಾಮಿಗಳನ್ನು ಬೆಳೆಸಲು ಅಥವಾ ಹೆಚ್ಚಿನ ವಿಶ್ವಾಸಾರ್ಹತೆ ನೀಡಲು ನಾನು ಬಯಸುವುದಿಲ್ಲ. ಮತ್ತೊಂದೆಡೆ, ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಾವು ಅಮೆರಿಕ ಮತ್ತು ಕೆನಡಾದ ಅಧಿಕಾರಿಗಳ ಬಳಿ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದೇವೆ" ಎಂದು ಅವರು ಹೇಳಿದ್ದಾರೆ.
ಬೆದರಿಕೆ ಸಂದೇಶವನ್ನು ಪನ್ನುನ್ ಬಿಡುಗಡೆ ಮಾಡಿದ ನಂತರ ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಬೆದರಿಕೆ ಬಂದಿದೆ. ಸಂಸತ್ತಿನ ಸುತ್ತಮುತ್ತ ಈಗಾಗಲೇ ಭದ್ರತೆ ಹೆಚ್ಚಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.